ಮಡಿಕೇರಿ: ʻಪಬ್ಲಿಕ್ ಟಿವಿʼ (Public TV) `ಬೆಳಕು’ ಕಾರ್ಯಕ್ರಮದಿಂದ (Belaku Program) ತಾಲೂಕಿನ (Madikeri) ಸಂಪಾಜೆ ಹೋಬಳಿಯ ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ಯಾಡಿಗೆ ಕಬ್ಬಿಣದ ತೂಗುಸೇತುವೆ ಭಾಗ್ಯ ಬಂದಿದೆ.
ಗ್ರಾಮದ ಹೆಬ್ಬಾಗಿಲಿನಲ್ಲಿ ಹರಿಯುವ ಹೊಳೆ 6 ತಿಂಗಳ ಕಾಲ ಹೊರಜಗತ್ತಿನೊಂದಿಗೆ ಗ್ರಾಮದ ಸಂಪರ್ಕವನ್ನೇ ಕಡಿದು ದೂರ ಇರಿಸುತ್ತದೆ. ಆ 6 ತಿಂಗಳ ಕಾಲ ಈ ಗ್ರಾಮದ ಜನರ ಬದುಕು ನರಕ ಯಾತನೆಯನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಜೂನ್ ತಿಂಗಳಲ್ಲಿ ಮುಂಗಾರು ಶುರುವಾಯ್ತು ಎಂದರೆ ನವೆಂಬರ್ ತಿಂಗಳ ಕೊನೆಯವರೆಗೂ ಇಲ್ಲಿ ಮಳೆ ಸುರಿಯುತ್ತದೆ. ಪರಿಣಾಮ ಡಿಸೆಂಬರ್ ಅಂತ್ಯದವರೆಗೂ ಈ ಹೊಳೆ ಮೈದುಂಬಿ 10 ರಿಂದ 12 ಅಡಿ ಎತ್ತರ ಹರಿಯುತ್ತದೆ. ಇದನ್ನು ದಾಟಿ ಯಾರೂ ಗ್ರಾಮದಿಂದ ಹೊರಕ್ಕೆ ಬರುವ ದುಸ್ಸಾಹಸ ಮಾಡುವಂತಿಲ್ಲ. ಅತ್ಯಂತ ಕಿರಿದಾದ ಕಾಲು ಸಂಕವೊಂದು ಇದ್ದು, ಅದು ಮುರಿದು ಬೀಳುವ ಹಂತದಲ್ಲಿದೆ.
ಅನಿವಾರ್ಯ ಸಂದರ್ಭಗಳಲ್ಲಿ ವೃದ್ಧರು, ವಿಕಲಚೇತನರು ಮತ್ತು ಚಿಕ್ಕಪುಟ್ಟ ಮಕ್ಕಳು ಇದೇ ಸಂಕದ ಮೇಲೆ ಜೀವ ಕೈಯಲ್ಲಿ ಹಿಡಿದು ದಾಟಿ ಹೊರಗೆ ಬರಬೇಕಾಗಿತ್ತು. ಇಲ್ಲಿನ ಗ್ರಾಮಸ್ಥರು ತಮ್ಮ ಈ ಸಮಸ್ಯೆಯನ್ನು ʻಬೆಳಕುʼ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.
ಜನರ ಸಮಸ್ಯೆಗೆ ಸ್ಪಂದಿಸಿದ್ದ ಪ್ರಣವ್ ಫೌಂಡೇಷನ್‌ನ ಸದಸ್ಯರು ಗ್ರಾಮಕ್ಕೆ ತೂಗುಸೇತುವೆ ಮಾಡಿಕೊಡುವ ಭರವಸೆ ನೀಡಿದ್ದರು. ಅಲ್ಲದೇ ಗ್ರಾಮದಲ್ಲಿ ಅರಣ್ಯ ಇಲಾಖೆಯ ಅನುಮತಿ ಹಾಗೂ ತಾಂತ್ರಿಕ ಕಾರಣದ ಬಗ್ಗೆ ʻಪಬ್ಲಿಕ್ ಟಿವಿʼ ಜೊತೆ ಹೇಳಿಕೊಂಡಿದ್ದರು. ʻಪಬ್ಲಿಕ್ ಟಿವಿʼ ತಂಡ ವಿರಾಜಪೇಟೆ ಶಾಸಕ ಎ.ಎಸ್ ಪೋನ್ನಣ್ಣ ಅವರೊಂದಿಗೆ ತೂಗುಸೇತುವೆ ನಿರ್ಮಾಣ ಮಾಡುವುದಕ್ಕೆ ಅನುಮತಿ ಕೊಡಿಸುವ ಬಗ್ಗೆ ಮಾತಾನಾಡಿ ಇಲ್ಲಿನ ಸಮಸ್ಯೆ ಮುಕ್ತಿ ನೀಡಬೇಕು ಎಂದು ಮನವಿ ಮಾಡಿದ್ದರು. ಇದೀಗ ಸೇತುವೆ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿದೆ.
ಅತ್ಯಾಡಿ ಗ್ರಾಮಸ್ಥರ ದಶಕಗಳ ಬೇಡಿಕೆಯನ್ನು ಈಡೆಸಿದ ʻಪಬ್ಲಿಕ್ ಟಿವಿʼಯ ಸಾರ್ಥಕ ಕೆಲಸಕ್ಕೆ ಗ್ರಾಮದ ಜನರು ಧನ್ಯವಾದ ತಿಳಿಸಿದ್ದಾರೆ.