ಬೀದರ್: ಇಲ್ಲಿನ ಗ್ರಾಮೀಣ ಪ್ರತಿಭೆ ಆರ್ಥಿಕ ಸಮಸ್ಯೆಯಿಂದ ಕಾಲೇಜು ಬಿಡುವ ಹಂತದಲ್ಲಿದ್ದಾನೆ. ಮೊದಲನೆ ವರ್ಷದ ವಿಜ್ಞಾನ ಪಿಯುಸಿ ಮುಗಿಸಿದ್ದು, ಎರಡನೇ ವರ್ಷದ ಪಿಯುಸಿಗೆ ಆರ್ಥಿಕ ಸಮಸ್ಯೆ ಎದುರಾಗಿದೆ. ಕಡು ಬಡತನದಲ್ಲಿ ಹುಟ್ಟಿದ ಈ ಗ್ರಾಮೀಣ ಪ್ರತಿಭೆಗೆ ವಿದ್ಯಾಭ್ಯಾಸ ಮಾಡಲು ಹಣವಿಲ್ಲದೆ ಒಂದು ವರ್ಷ ಮನೆಯಲ್ಲಿ ಕುಳಿತುಕೊಂಡಿದ್ದಾನೆ. ಇದೀಗ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕವಾದ್ರು ಯಾರಾದ್ರೂ ದಾನಿಗಳು ಸಹಾಯ ಮಾಡುವ ಮೂಲಕ ನನ್ನ ಜೀವನಕ್ಕೆ ಬೆಳಕು ನೀಡುತ್ತಾರೆ ಎಂಬ ಭರವಸೆಯಲ್ಲಿದ್ದಾನೆ.
ಬೀದರ್ ನಗರದ ಅಬ್ದುಲ್ ಫೈಜಾ ದರ್ಗಾ ಕಾಲೋನಿಯ ನಿವಾಸಿಯಾಗಿರುವ ಮಹ್ಮದ್ ಇಲಿಯಾಜ್ ಇದೀಗ ಶಿಕ್ಷಣದಿಂದ ವಂಚಿತನಾಗುತ್ತಿರುವ ಗ್ರಾಮೀಣ ಪ್ರತಿಭೆ. ಎಸ್‍ಎಸ್‍ಎಲ್‍ಸಿ ಯಲ್ಲಿ 55% ಹಾಗೂ ಪ್ರಥಮ ಪಿಯುಸಿಯಲ್ಲಿ 53% ಅಂಕ ತೆಗೆದುಕೊಂಡು ದಾನಿಗಳ ಸಹಾಯದಿಂದ ಓದು ಮುಗಿಸಿದ್ದಾನೆ. ಆದ್ರೆ ಎರಡನೆಯ ವರ್ಷದ ಪಿಯುಸಿ ಮುಗಿಸಲು 12 ಸಾವಿರ ರೂ. ಬೇಕಾಗಿದೆ. ಆದ್ರೆ ಅಷ್ಟೊಂದು ಹಣ ಕೊಡಲು ಅಸಾಧ್ಯವಾಗಿರುವುದರಿಂದ ಮುಂದಿನ ಶಿಕ್ಷಣವನ್ನೇ ಕೈ ಬಿಡುವ ಹಂತದಲ್ಲಿದ್ದಾನೆ.
ಈಗಾಗಲೇ ಆರ್ಥಿಕ ಸಮಸ್ಯೆಯಿಂದ ಒಂದು ವರ್ಷ ಮನೆಯಲ್ಲೆ ಕಳೆದಿದ್ದು, ಈಗಲಾದ್ರು ಯಾರಾದ್ರು ದಾನಿಗಳು ಸಹಾಯ ಮಾಡಿದ್ರೆ ಓದಿ ಡಾಕ್ಟರೋ, ಇಂಜಿನಿಯರೋ ಆಗ್ತೀನಿ ಅನ್ನೋ ಕನಸು ಕಾಣುತ್ತಿದ್ದಾನೆ. ಕುಟುಂಬ ಒಂದು ಹೊತ್ತಿನ ಊಟಕ್ಕೆ ಪ್ರತಿದಿನ ನರಕಯಾತನೆ ಪಡುತ್ತಿದ್ದು, ಇರಲು ಒಂದು ಸರಿಯಾದ ನಿವೇಶನ ಇಲ್ಲದೆ ಬಾಡಿಗೆ ನೀಡಿ ಮುರುಕಲು ಮನೆಯಲ್ಲಿ ವಾಸವಾಗಿದ್ದಾರೆ. ಇದಕ್ಕೆ ಪ್ರತಿ ತಿಂಗಳು 1500 ರೂ. ಹಣ ನೀಡುತ್ತಿದ್ದು, ಇನ್ನು ಶಿಕ್ಷಣದ ಮಾತೆಲ್ಲಿ! ನನಗೆ ಓದುವ ಮನಸ್ಸಿದ್ದು, ಯಾರಾದ್ರೂ ದಾನಿಗಳು ಸಹಾಯ ಮಾಡಿದ್ರೆ ಖಂಡಿತ ಓದಿ ಮುಂದೆ ಜೀವನ ರೂಪಿಸಿಕೊಳ್ಳುತ್ತೇನೆ ಅಂತಾ ನೊಂದ ವಿದ್ಯಾರ್ಥಿ ಹೇಳುತ್ತಿದ್ದಾನೆ.
ಮಹ್ಮದ್ ಗೌಸ್ ಮತ್ತು ಅಮೀರಾ ಬಿ ದಂಪತಿಗಳಿಗೆ ಒಟ್ಟು ನಾಲ್ಕು ಜನ ಮಕ್ಕಳಿದ್ದು, ಶಿಕ್ಷಣ ಪಡೆಯದೆ ಕೂಲಿ ಕೆಲಸ ಮಾಡುತ್ತಿದ್ದಾರೆ. ತಂದೆ ಮಹ್ಮದ್ ಗೌಸ್ ಕೂಡಾ ಕುಟುಂಬ ನಿರ್ವಹಣೆ ಮಾಡಲು 14 ಗಂಟೆಗಳ ಕಾಲ ಆಟೋ ಓಡಿಸಿ 200 ರಿಂದ 300 ರೂ. ವರೆಗೆ ಸಂಪಾದನೆ ಮಾಡುತ್ತಾರೆ. ಆದ್ರೆ ಇದು ಜೀವನ ನಿರ್ವಹಣೆಗೆ ಸರಿಯಾಗುತ್ತಿದ್ದು, ಮಕ್ಕಳಿಗೆ ಶಿಕ್ಷಣ ಕೊಡಿಸುವ ಸಾಮಥ್ರ್ಯ ಪೋಷಕರಿಗಿಲ್ಲ. ಹೀಗಾಗಿ ಯಾರಾದ್ರೂ ದಾನಿಗಳು ಸಹಾಯ ಮಾಡಿದ್ರೆ ನನ್ನ ಮಗ ಶಿಕ್ಷಣವನ್ನು ಮುಂದುವರಿಸಬಹುದು ಎಂದು ಬೇಡಿಕೊಳ್ಳುತ್ತಿದ್ದಾರೆ.
ವಿದ್ಯಾರ್ಥಿ ಕೂಡಾ ಒಂದು ವರ್ಷ ಶಿಕ್ಷಣದಿಂದ ದೂರ ಉಳಿದು ಸಮಯ ವ್ಯರ್ಥ ಮಾಡಿದ್ದು, ಈಗಾಲಾದ್ರೂ ಯಾರಾದ್ರೂ ನೆರವಿಗೆ ಬಂದ್ರೆ ಓದುವ ಅಭಿಲಾಷೆ ಇಟ್ಟುಕೊಂಡಿದ್ದಾನೆ. ತಂದೆ ಕೂಡ ಮಗನಿಗೆ ಶಿಕ್ಷಣ ನೀಡಬೇಕು ಎಂದು ಹರಸಾಹಸ ಪಡುತ್ತಿದ್ದು ಸಹಾಯಕ್ಕಾಗಿ ಪರಿ ಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ.
ಹಣವಿದ್ರೂ ಓದಲು ಆಸಕ್ತಿ ಇಲ್ಲದ ಸಾವಿರಾರು ವಿದ್ಯಾರ್ಥಿಗಳ ಮಧ್ಯೆ ಈ ಗ್ರಾಮೀಣ ಪ್ರತಿಭೆಗೆ ಹಣವಿಲ್ಲದೆ ಶಿಕ್ಷಣ ತೊರೆಯುತ್ತಿರುವುದು ಬೇಸರದ ಸಂಗತಿಯಾಗಿದೆ. ಕಡುಬಡತನದಲ್ಲಿ ನೊಂದು ಬೆಂದಿರುವ ಈ ಕುಡುಂಬಕ್ಕೆ ಮಗನಿಗೆ ಶಿಕ್ಷಣ ನೀಡುವುದು ಅಸಾಧ್ಯವಾದ ಮಾತಾಗಿದೆ. ಒಟ್ಟಿನಲ್ಲಿ ಈ ಗ್ರಾಮೀಣ ಪ್ರತಿಭೆಯ ಸ್ಟೋರಿ ನೋಡಿದ ಯಾರಾದ್ರು ದಾನಿಗಳು ಸಹಾಯ ಮಾಡಿ ಆತನ ವಿದ್ಯಾರ್ಥಿ ಜೀವನಕ್ಕೆ ಬೆಳಕು ನೀಡುವಂತಾಗಲಿ ಅನ್ನೋದು ನಮ್ಮ ಆಶಯ.