ರಾಯಚೂರು: ಮುಪ್ಪಾದ ಕಾಲಕ್ಕೆ ಮಕ್ಕಳು ಇರದಿದ್ದರೂ ಒಂದು ಸೂರು, ತುತ್ತು ಅನ್ನ ಇದ್ರೆ ವಯೋವೃದ್ಧರು ಹೇಗೋ ಇರುವಷ್ಟು ದಿನ ಪಾಲಿಗೆ ಬಂದಿದ್ದು ಪಂಚಾಮೃತ ಅಂತ ಕಾಲ ದೂಡ್ತಾರೆ. ಆದ್ರೆ ರಾಯಚೂರಿನ ಈ ಇಬ್ಬರು ಅಜ್ಜಿಯರು ಎಲ್ಲರೂ ಇದ್ದೂ ಏನೂ ಇಲ್ಲದಂತೆ ಬದುಕುತ್ತಿದ್ದಾರೆ.
Advertisement
85ರ ಆಸುಪಾಸಿನಲ್ಲಿರುವ ಅಜ್ಜಿ ಸಂಗಮ್ಮ ಮತ್ತು 63ರ ವಯಸ್ಸಿನ ಬೂದೆಮ್ಮ ಸೂರಿಗಾಗಿ ಬೆಳಕು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. 85ರ ಆಸುಪಾಸಿನಲ್ಲಿರುವ ಅಜ್ಜಿ ಸಂಗಮ್ಮರಿಗೆ ಮೂವರು ಹೆಣ್ಣು ಮಕ್ಕಳು ಹಾಗೂ ಮೂವರು ಗಂಡು ಮಕ್ಕಳು. ಆದ್ರೆ ಮಗಳು ಬೂದೆಮ್ಮ ಮಾತ್ರ ತಾಯಿಯ ಬಗ್ಗೆ ಕಾಳಜಿ ತೋರಿಸಿ ಈ ಪುಟ್ಟ ಮುರುಕಲು ಮನೆಯಲ್ಲಿಟ್ಟುಕೊಂಡಿದ್ದಾರೆ. 63 ವರ್ಷದ ಬೂದೆಮ್ಮರಿಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ ಇದ್ದಾನೆ. ಆದ್ರೆ ಮಗ ಇದ್ದರೂ ಇಲ್ಲದಂತಿದ್ದು, ಹೆಣ್ಣು ಮಕ್ಕಳು ತಮ್ಮ ಗಂಡನ ಮನೆ ಸೇರಿಕೊಂಡಿದ್ದಾರೆ. ಹೀಗಾಗಿ ಈ ಇಬ್ಬರು ಅಜ್ಜಿಯರು ತಮಗೆ ತಾವೇ ಆಸರೆಯಾಗಿದ್ದಾರೆ.
Advertisement
Advertisement
Advertisement
ಅಕ್ಕಪಕ್ಕದ ಮನೆಗಳಲ್ಲಿ ಜೋಳದ ರೊಟ್ಟಿ ಮಾಡಿ ಅಷ್ಟೋ ಇಷ್ಟೂ ಹಣ ಪಡೆದು ಅದರಲ್ಲೇ ಸಂಗಮ್ಮ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದಾರೆ. ದುರಂತ ಅಂದ್ರೆ ಇಬ್ಬರೂ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ದುಡಿದ ಹಣ ಅನ್ನಕ್ಕಿಂತ ಔಷಧಿಗೆ ಹೆಚ್ಚು ಖರ್ಚಾಗುತ್ತಿದೆ. ಆದ್ರೆ ಇವರ ಬಹುಮುಖ್ಯ ಸಮಸ್ಯೆ ಕನಿಷ್ಠ ಭದ್ರತೆಯೂ ಇಲ್ಲದ ಇವರ ಗುಡಿಸಲು. ಮಳೆ ಬಂದರೆ ನಿರಂತರ ತೊಟ್ಟಿಕ್ಕುವ ಗುಡಿಸಲಿನಿಂದ ಅಜ್ಜಿಯರಿಗೆ ಭದ್ರತೆ ಬೇಕಿದೆ.
ಸುಮಾರು ವರ್ಷಗಳ ಕೆಳಗೆ ವಸತಿಯೋಜನೆಯಡಿ ಸಿಕ್ಕ 13*18 ಚದರಡಿಯ ಜಾಗದಲ್ಲಿ ಪುಟ್ಟ ಗುಡಿಸಲು ಹಾಕಿಕೊಂಡಿದ್ದಾರೆ. ಅಕ್ಕಪಕ್ಕದ ಮನೆಯ ಎರಡು ಗೋಡೆಗಳನ್ನ ಅವಲಂಬಿಸಿ ಮಧ್ಯದಲ್ಲಿ ವಾಸಿಸುತ್ತಿದ್ದಾರೆ. ಖಾಸಗಿ ವಾಹನ ಚಾಲಕರಾಗಿದ್ದ ಬೂದೆಮ್ಮ ಅವರ ಗಂಡ ಬೂದಿಬಸ್ಸಪ್ಪ 2011ರಲ್ಲಿ ಸಾವನ್ನಪ್ಪಿದ ನಂತರ ಈ ಇಬ್ಬರನ್ನ ನೋಡಿಕೊಳ್ಳುವವರೇ ಇಲ್ಲದಂತಾಗಿದೆ. ಅಜ್ಜಿಯ ಸಮಸ್ಯೆಯನ್ನ ಅರಿತಿರುವ ರಾಯಚೂರಿನ ಕ್ಯಾಷೋಟೆಕ್ ಸಂಸ್ಥೆ ತಮ್ಮಲ್ಲಿನ ಗೃಹ ನಿರ್ಮಾಣ ವಸ್ತುಗಳನ್ನ ಬಳಸಿ ಸೂರು ನಿರ್ಮಿಸಿಕೊಡಲು ಮುಂದೆ ಬಂದಿದೆ.
ಒಟ್ನಲ್ಲಿ, ಚಿಕ್ಕವರಿದ್ದಾಗಿನಿಂದ ಸಾಕಿ ಸಲುಹಿ ಬೆಳೆಸಿದ ಹೆತ್ತವರು ಮುಪ್ಪಾಗುತ್ತಿದ್ದಂತೆ ಮಕ್ಕಳಿಗೆ ಬೇಡವಾಗುವುದು ಮಾತ್ರ ದುರಂತ. ಮಕ್ಕಳಿದ್ದರೂ ಆಶ್ರಯವಿಲ್ಲದೆ ಕಂಡವರ ಹತ್ತಿರ ಕೈಚಾಚಲು ಮನಸ್ಸಿಲ್ಲದೆ ರೊಟ್ಟಿ ಮಾಡಿ ಬದುಕುತ್ತಿರುವ ಈ ಅಜ್ಜಿಯರಿಗೆ ಒಂದು ಸೂರು ಬೇಕಿದೆ.