ಭಿಕ್ಷೆ ಬೇಡಲ್ಲ, ಟೀ ಅಂಗಡಿ ಹಾಕಿ ಕೊಟ್ರೆ ಜೀವನ ಸಾಗಿಸ್ತೀನಿ: ವಿಕಲಚೇತನ ಸ್ವಾಭಿಮಾನಿಗೆ ಬೇಕಿದೆ ಸಹಾಯ

Public TV
1 Min Read
BDR BELAKU 3

ಬೀದರ್: ಕೂಲಿ ಮಾಡಿ ನಾಲ್ಕು ಕಾಸು ಸಂಪಾದಿಸಿ ಸ್ವಾಭಿಮಾನದಿಂದ ಬದುಕಬೇಕು ಎಂದು ಕನಸು ಕಾಣುತ್ತಾ ಬೀದರ್‍ನಿಂದ ಮುಂಬೈಗೆ ಹೋಗಿದ್ದ ವಿಕಲಚೇತನ ಬಾಬು ಜೀವನ ಈಗ ಸೂತ್ರ ಹರಿದ ಗಾಳಿಪಟವಾಗಿದೆ.

ಕೆಲವು ತಿಂಗಳ ಹಿಂದೆ ಕೂಲಿ ಕೆಲಸ ಮಾಡುವಾಗ ಬಿಲ್ಡಿಂಗ್ ಮೇಲಿಂದ ಬಿದ್ದು ಕಬ್ಬಿಣದ ರಾಡ್ ಕಾಲು ಹಾಗೂ ಹೊಟ್ಟೆ ಸೇರಿದ್ರಿಂದ ಕಾಲಿನ ಸ್ವಾಧೀನ ಕಳೆದುಕೊಂಡು ತುತ್ತಿನ ಚೀಲ ತುಂಬಿಸಲು ನರಕಯಾತನೆ ಅನುಭವಿಸುತ್ತಿದ್ದಾರೆ. ಬಿಲ್ಡಿಂಗ್ ಮಾಲೀಕರಾಗಲಿ, ಕಾರ್ಮಿಕ ಇಲಾಖೆಯಾಗಲಿ ಬಾಬು ಅವರ ಸಹಾಯಕ್ಕೆ ಬಾರದೇ ಇರುವ ಕಾರಣ ಮತ್ತಷ್ಟು ನೋವು ಅನುಭವಿಸುತ್ತಿದ್ದಾರೆ.

BDR BELAKU 1

ಕಿತ್ತು ತಿನ್ನುವ ಬಡತನ ಬಾಬು ಅವರನ್ನು ಭಿಕ್ಷೆಗೆ ದೂಡಿದೆ. ಪ್ರತಿ ದಿನ ಬೀದರ್ ರೈಲ್ವೆ ನಿಲ್ದಾಣಕ್ಕೆ ಬಂದು ಭಿಕ್ಷೆ ಬೇಡಿ 100 ರಿಂದ 200 ಸಂಪಾದನೆ ಮಾಡುತ್ತಾರೆ. ಆದ್ರೆ ಪೊಲೀಸರು ಭಿಕ್ಷಾಟನೆಗೆ ಬ್ರೇಕ್ ಹಾಕ್ತಿರೋದ್ರಿಂದ ಯಾರಾದ್ರೂ ದಾನಿಗಳು ಒಂದು ಟೀ ಅಂಗಡಿ ಹಾಕಿಕೊಟ್ರೆ ಜೀವನ ಸಾಗಿಸುತ್ತೆನೆ ಎಂದು ಬಾಬು ಮನವಿ ಮಾಡಿಕೊಳ್ಳುತ್ತಾರೆ.

ಪತ್ನಿ, ತಾಯಿ ಹಾಗೂ ಮೂರು ಮಕ್ಕಳ ಹೊಟ್ಟೆಪಾಡಿಗಾಗಿ ಏನಾದರೂ ಕೆಲಸ ಮಾಡ್ತೀನಿ ಎನ್ನುವ ಇವರ ಆತ್ಮವಿಶ್ವಾಸ ಇಲ್ಲಿಯವರೆಗೂ ಕರೆತಂದಿದೆ. ಇನ್ನು ಪತ್ನಿ ಜಗದೇವಿ ಪ್ರತಿದಿನ ಕೂಲಿಗೆ ಹೋಗಿ ಸಂಸಾರ ಸಾಗಿಸಲು ಪತಿಗೆ ಸಾಥ್ ನೀಡುತ್ತಿದ್ದಾರೆ. ಈ ಕ್ಷೇತ್ರದ ಸನ್ಮಾನ್ಯ ಶಾಸಕ ಅಶೋಕ್ ಖೇಣಿ ಅವರು ಕ್ಷೇತ್ರವನ್ನು ಸಿಂಗಾಪೂರ ಮಾಡುವುದಾಗಿ ಹೇಳಿ ಹೋಗಿದ್ದು ಬಿಟ್ರೆ ನಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

BDR BELAKU 2

ಕಲರ್ ಕಲರ್ ಕನಸು ಕಂಡು ದೂರದ ಮುಂಬೈಗೆ ಹೋಗಿ ಕಾಲು ಕಳೆದುಕೊಂಡು ಈಗ ಜೀವನಕ್ಕಾಗಿ ಭಿಕ್ಷೆ ಬೇಡುತ್ತಿರುವ ಈ ವಿಕಲಚೇತನನ ಬಾಬು ಅವರಿಗೆ ಯಾರಾದ್ರೂ ದಾನಿಗಳು ಸಹಾಯ ಮಾಡಿ ಮಾನವೀಯತೆ ತೋರಿಸಬೇಕಿದೆ.

BDR BELAKU 4

 

Share This Article