ಬೆಳಗಾವಿ: ಕೊಳಚೆ ಪ್ರದೇಶದಲ್ಲಿ ವಾಸಮಾಡುತ್ತಿದ್ದರು, ಉನ್ನತ ವ್ಯಾಸಂಗ ಪಡೆದು ತನ್ನಂತೆ ಸ್ಲಂನಲ್ಲಿ ವಾಸಿಸುವ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಬೆಳಗಾವಿಯ ವಿದ್ಯಾರ್ಥಿನಿ ಕನಸಿಗೆ ಬಡತನ ಅಡ್ಡಿಯಾಗಿದೆ.
ಮನೆಯಲ್ಲಿ ಬಡತನವಿದ್ದರೂ ಅಂಜಲಿ ಕೊಂಡುರ್ ತನ್ನ ಕಷ್ಟಗಳನ್ನ ಬದಿಗಿರಿಸಿ ಎಸ್‍ಎಸ್‍ಎಲ್‍ಸಿಯಲ್ಲಿ ಶೇಕಡಾ 78.88% ಹಾಗೂ ಪಿಯುಸಿ ಕಲಾ ವಿಭಾಗದಲ್ಲಿ ಶೇಕಡಾ 82.66% ಅಂಕ ಪಡೆದು ಇಡೀ ಕಾಲೇಜಿಗೆ ಫಸ್ಟ್ ರ‍್ಯಾಂಕ್ ಪಡೆದು ಕೀರ್ತಿ ತಂದುಕೊಟ್ಟಿದ್ದಾಳೆ.
ಬೆಳಗಾವಿಯ ಕಣಬರ್ಗಿಯ ಸ್ಲಂನ ಸಣ್ಣ ಗುಡಿಸಲು ಮನೆಯಲ್ಲಿ ಇಬ್ಬರು ಸಹೋದರರು ಮತ್ತು ತಾಯಿ ಜೊತೆ ಅಂಜಲಿ ವಾಸವಿದ್ದಾಳೆ. ಎಲ್ಲರಂತೆ ಶಾಲೆಗೆ ತೆರಳಿ ಉತ್ತಮ ಶಿಕ್ಷಣ ಪಡೆಯಬೇಕೆಂಬ ಮಗಳ ಕನಸಿಗೆ ತಾಯಿ ರೇಣುಕಾ ಬೆಂಬಲ ನೀಡಿದ ಪರಿಣಾಮ ಶಿಕ್ಷಣ ಈಗ ಕಷ್ಟದಲ್ಲಿ ಸಾಗಿಕೊಂಡು ಬಂದಿದೆ.
10 ವರ್ಷಗಳ ಹಿಂದೆ ತಂದೆ ಮಹೇಶ್ ಕುಡಿತದ ಚಟಕ್ಕೆ ಬಿದ್ದು ತೀರಿಹೋಗಿದ್ದು, ಇಡೀ ಸಂಸಾರದ ಜವಾಬ್ದಾರಿಯನ್ನು ತಾಯಿ ರೇಣುಕಾ ನೋಡಿಕೊಳ್ಳುತ್ತಿದ್ದಾರೆ. ಊರೂರು ತೆರಳಿ ವಾಲೆ, ಬಳೆ, ಪುಸ್ತಕ ಮಾರಾಟ ಮಾಡಿ ಬಂದ ಹಣದಿಂದ ಮೂರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ.
ಸ್ಲಂನಲ್ಲಿ ಯಾರೂ ಓದದೇ ಇದ್ದರೂ ಛಲದಿಂದ ಓದಿ ಸಾಧಿಸಿ ತೋರಿಸಿರುವ ಪ್ರತಿಭೆಯಾಗಿರುವ ಅಂಜಲಿ ಮುಂದೆ ಓದಿ ಟೀಚರ್ ಆಗಿ ಸ್ಲಂನ ಮಕ್ಕಳಿಗೆ ವಿದ್ಯೆ ಕಲಿಸಬೇಕೆಂಬ ಕನಸು ಕಂಡಿದ್ದಾಳೆ. ಆದರೆ ಉನ್ನತ ವ್ಯಾಸಂಗ ಪಡೆಯಲು ಬಡತನ ಅಡ್ಡಿಯಾಗಿದೆ. ಮೂರು ಮಕ್ಕಳನ್ನು ಕಷ್ಟ ಪಟ್ಟು ಓದಿಸುತ್ತಿರುವ ತಾಯಿ, ಅಂಜಲಿಯ ಮುಂದಿನ ವಿದ್ಯಾಭ್ಯಾಸಕ್ಕೆ ಹಣ ಒದಗಿಸಲಾಗದೇ ಓದನ್ನು ನಿಲ್ಲಿಸಿದ್ದಾಳೆ.
ಅಂಜಲಿಗೆ ಶಿಕ್ಷಕಿಯಾಗಬೇಕೆಂಬ ಕನಸು ಇದ್ದು, ಯಾರಾದರು ದಾನಿಗಳು ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ತಾಯಿ ರೇಣುಕಾ ಕೇಳಿಕೊಳ್ಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=N7Wztkxi_tU