ಬೆಳಗಾವಿ: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ಐಹೊಳೆ ಅವರಿಗೆ ಬಂಧನದ ಭೀತಿ ಎದುರಾಗಿದೆ.
ನಿವೇಶನ ಕೊಡಿಸುವ ಹಾಗೂ ಠೇವಣಿ ಹಣ ಪಡೆದು ವಾಪಸ್ ನೀಡದೆ ವಂಚಿಸಿದ ಆರೋಪದ ಮೇಲೆ ಪತಿ ಪ್ರಶಾಂತ್ ಐಹೊಳೆ ಬಂಧನದ ಬಳಿಕ ಈಗ ಬೆಳಗಾವಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬಂಧನದ ಭೀತಿ ಎದುರಿಸುತ್ತಿದ್ದಾರೆ.
ಅಥಣಿಯ ಮಹಾಲಕ್ಷ್ಮಿ ಡಿಸ್ಟ್ರಿಬ್ಯುಶನ್ ಹಾಗೂ ಮಹಾಲಕ್ಷ್ಮಿ ಎಸ್ಟೇಟ್ ಸಂಸ್ಥೆಯ ಹೆಸರಿನಲ್ಲಿ ವಂಚನೆ ನಡೆಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಠೇವಣಿ ಹಣ ವಾಪಸ್ ನೀಡುತ್ತಿಲ್ಲ ಎಂದು ಉಗಾರ ಗ್ರಾಮದ ಧರೆಪ್ಪ ಸತ್ತೆಪ್ಪ ಕುಸನಾಳ ಮೇ 6 ರಂದು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ಹಿನ್ನೆಲೆಯಲ್ಲಿ ಆಶಾ ಐಹೊಳೆ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನನ್ನು ಬೆಳಗಾವಿ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ. ಈಗಾಗಲೇ ನಿವೇಶನ ಕೊಡಿಸುವುದಾಗಿ ನಂಬಿಸಿ ಹಣ ವಾಪಸ್ ನೀಡದಕ್ಕೆ ಆಶಾ ಐಹೊಳೆ ಪತಿ ಪ್ರಶಾಂತ್ ಐಹೊಳೆ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.
ನೂರಾರು ಜನರಿಗೆ ನಿವೇಶನ ನೀಡುತ್ತೇನೆ ಎಂದು ಹಣ ಠೇವಣಿ ಇಟ್ಟುಕೊಂಡು ಹಣವನ್ನೂ ಕೊಡದೇ ನಿವೇಶನವನ್ನು ಕೊಡದೇ ಜಿಲ್ಲಾ ಪಂಚಾಯತ್ ಅಧ್ಯಕ್ಷ ಆಶಾ ಐಹೊಳೆ ಹಾಗೂ ಅವರ ಪತಿ ಸತಾಯಿಸುತ್ತಿದ್ದಾರೆ ಎಂದು ವಂಚನೆಗೆ ಒಳಗಾದವರು ಆರೋಪಿಸುತ್ತಿದ್ದಾರೆ.