ಬೆಂಗಳೂರು: ವಂಟಮುರಿ ಮಹಿಳೆ ವಿವಸ್ತ್ರ ಪ್ರಕರಣದ ಬಗ್ಗೆ ಸರ್ಕಾರದ ವಿರುದ್ಧ ಮಾತನಾಡದೇ ಸುಮ್ಮನಿದ್ದಾರೆ ಎಂದು ರಾಜ್ಯ ಬಿಜೆಪಿ ನಾಯಕರ ಮೇಲೆ ಹೈಕಮಾಂಡ್ ಗರಂ ಆಗಿದೆ.
ವಂಟಮುರಿ ಮಹಿಳೆ ವಿವಸ್ತ್ರ ಕೇಸ್ ದೇಶಾದ್ಯಂತ ಸದ್ದು ಮಾಡುತ್ತಿದೆ. ಸರ್ಕಾರ ಹಾಗೂ ಬೆಳಗಾವಿ ಪೊಲೀಸರಿಗೆ ಹೈಕೋರ್ಟ್ ಛೀಮಾರಿ ಹಾಕಿದೆ. ಪ್ರಕರಣವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಅಟ್ಯಾಕ್ ಮಾಡಲು ಬಿಜೆಪಿ ಮುಂದಾಗಿದೆ. ಇದುವರೆಗೂ ಏನನ್ನೂ ಮಾತನಾಡದ ರಾಜ್ಯ ನಾಯಕರಿಗೆ ಹೈಕಮಾಂಡ್ ಬಿಸಿ ಮುಟ್ಟಿಸಿದೆ. ಇದನ್ನೂ ಓದಿ: ಹೊಸ ವರ್ಷಕ್ಕೆ ನಂದಿನಿ ಹಾಲು, ಮೊಸರು ದರ ಏರಿಕೆ – ಸರ್ಕಾರದಿಂದ ಸುಳಿವು
ನಿಯಮ 69 ರಡಿ ನಡೆಯಲಿರುವ ಕಾನೂನು ಸುವ್ಯವಸ್ಥೆ ವೈಫಲ್ಯ ಕುರಿತ ಚರ್ಚೆ ವೇಳೆ ಒಗ್ಗಟ್ಟಿನ ವಾಗ್ದಾಳಿ ನಡೆಸಲು ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಖಡಕ್ ಸೂಚನೆ ನೀಡಿದೆ. ಪ್ರಕರಣ ಬಗ್ಗೆ ಗಟ್ಟಿಯಾಗಿ ಪ್ರಸ್ತಾಪಿಸಿ ಸರ್ಕಾರಕ್ಕೆ ಚಾಟಿ ಬೀಸುವಂತೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆ ನೀಡಿದ್ದಾರೆ.
ಇದುವರೆಗೆ ಸದನದಲ್ಲಿ ಈ ಪ್ರಕರಣದ ಬಗ್ಗೆ ಸರಿಯಾದ ಹೋರಾಟ ಮಾಡದಿರುವ ಬಿಜೆಪಿ ನಾಯಕರ ನಡೆಗೆ ನಡ್ಡಾ ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ವಂಟಮುರಿ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಮುಗಿಬೀಳಲು ಬಿಜೆಪಿ ಸದಸ್ಯರು ಮುಂದಾಗಿದ್ದಾರೆ. ಇದನ್ನೂ ಓದಿ: ಸಂಸತ್ ಸ್ಮೋಕ್ ಬಾಂಬ್ ಕೇಸ್ – ಟಿಎಂಸಿ ಶಾಸಕನ ಜೊತೆ ಆರೋಪಿ – ಫೋಟೋ ಹರಿಬಿಟ್ಟ ಬಿಜೆಪಿ
ದೆಹಲಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕ ಆರ್.ಅಶೋಕ್‌ಗೆ ಕರೆ ಮಾಡಿ ಜೆ.ಪಿ.ನಡ್ಡಾ ಸೂಚನೆ ನೀಡಿದ್ದಾರೆ. ಮಹಿಳೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಿ. ಸದನದಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಿತ್ತು. ಯಾಕೆ ವಿಚಾರವನ್ನು ದೊಡ್ಡದಾಗಿ ಪರಿಗಣಿಸಿಲ್ಲ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ವರಿಷ್ಠರ ಕ್ಲಾಸ್ ಬಳಿಕ ರಾಜ್ಯ ನಾಯಕರು ಎಚ್ಚೆತ್ತಿದ್ದಾರೆ. ಕೊನೆಯ ದಿನದ ಅಧಿವೇಶನದಲ್ಲಿ ಅದರ ಬಗ್ಗೆ ಮಾತನಾಡಲು ಸಿದ್ಧತೆ ನಡೆಸಿದ್ದಾರೆ. ಈ ಬಗ್ಗೆ ಎಲ್ಲಾ ಶಾಸಕರಿಗೂ ಆರ್.ಅಶೋಕ್ ಸಂದೇಶ ನೀಡಿದ್ದಾರೆ. ಇದರ ಬಗ್ಗೆ ಪ್ರಸ್ತಾಪ ಮಾಡಿದಾಗ ಎಲ್ಲರೂ ಒಟ್ಟಾಗಿ ನಿಲ್ಲುವಂತೆ ಸೂಚನೆ ನೀಡಿದ್ದಾರೆ.