ಬರಗಾಲ ಸೇರಿ ಸರ್ಕಾರದ 60 ತಪ್ಪುಗಳ ಕುರಿತು ಕಿವಿ ಹಿಂಡುವ ಕಾರ್ಯ; ಜೆಡಿಎಸ್ ಜೊತೆ ಒಂದಾಗಿ ಹೋರಾಟ: ಆರ್.ಅಶೋಕ್

Public TV
2 Min Read
R.ASHOK

ಬೆಂಗಳೂರು: ಬೆಳಗಾವಿ (Belagavi) ಅಧಿವೇಶನ (Winter Session) ಬಿಜೆಪಿ ಪಾಲಿಗೆ ಅತ್ಯಂತ ಪ್ರಮುಖವಾದುದು. ರಾಜ್ಯದ ಕಾಂಗ್ರೆಸ್ (Congress) ಸರ್ಕಾರ ಕೇವಲ ಆರು ತಿಂಗಳಲ್ಲಿ 60 ತಪ್ಪುಗಳನ್ನು ಮಾಡಿದೆ. ಅಧಿವೇಶನದಲ್ಲಿ ಈ ಸಂಬಂಧ ಕಿವಿ ಹಿಂಡುವ ಕಾರ್ಯ ಕೈಗೆತ್ತಿಕೊಳ್ಳುತ್ತೇವೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R.Ashok) ತಿಳಿಸಿದರು.

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ಪ್ರಾರಂಭದಲ್ಲೇ ಟ್ರಾನ್ಸ್‌‌ಫರ್ ದಂಧೆಯ ಅಂಗಡಿಗಳನ್ನು ತೆರೆದಿದ್ದಾರೆ. ಆಡಳಿತವು ಭ್ರಷ್ಟಾಚಾರದ ಕೂಪವಾಗಿದೆ. ಬೆಂಗಳೂರಿನಲ್ಲಿ ದಾಳಿ ನಡೆಸಿದಾಗ ಸುಮಾರು 100 ಕೋಟಿಗೂ ಹೆಚ್ಚು ಕಳ್ಳಹಣ ಸಿಕ್ಕಿದ್ದು, ಇದು ಟ್ರಾನ್ಸ್‌ಫರ್‌ ದಂಧೆಯ ಸ್ಪಷ್ಟರೂಪ ಎಂದು ಆರೋಪಿಸಿದರು. ಇದನ್ನೂ ಓದಿ: ತೆಲಂಗಾಣ ಶಾಸಕರಿಗೆ ಮಟನ್, ಚಿಕನ್ ಬಿರಿಯಾನಿ ಬೇಕಾ ಅಂತ ವಿಚಾರಿಸಲು ಡಿಕೆಶಿ ತೆರಳಿದ್ದು: ಆರ್.ಅಶೋಕ್

SIDDU DKSHI

ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ಜನತೆಗೆ ಮೋಸ ಮಾಡಿದ್ದಾರೆ. ತಮಿಳುನಾಡಿನಲ್ಲಿ ಮಿತ್ರ ಸ್ಟಾಲಿನ್ ಇದ್ದಾರೆಂದು, ಅವರಿಗೆ ಸಹಾಯ ಮಾಡಲು ಹಳೆ ಮೈಸೂರಿನ ಭಾಗದ ಜನರಿಗೆ ಮೋಸ ಮಾಡಲಾಗಿದೆ. ಇತರ ಬಹಳಷ್ಟು ವಿಚಾರಗಳಲ್ಲಿ ಸರ್ಕಾರ ತಪ್ಪು ಮಾಡಿದೆ. ವಿರೋಧ ಪಕ್ಷದ ನಾಯಕನಾಗಿ ನಮ್ಮೆಲ್ಲ 66 ಜನ ಶಾಸಕರು, ಜೆಡಿಎಸ್‍ನ 19 ಜನರು ಸೇರಿ ನಿಲುವಳಿ ಸೂಚನೆ ಮಂಡಿಸುತ್ತೇವೆ ಎಂದರು.

ನಿನ್ನೆ ನಾನು, ನಮ್ಮ ರಾಜ್ಯಾಧ್ಯಕ್ಷರು ಮತ್ತು ಜೆಡಿಎಸ್‍ನ ಕುಮಾರಸ್ವಾಮಿ ಮತ್ತಿತರ ಪ್ರಮುಖರ ಜೊತೆ ಮಾತನಾಡಿದ್ದೇವೆ. ನಾವೆಲ್ಲರೂ ಸೇರಿ ಸರ್ಕಾರಕ್ಕೆ ಕಿವಿ ಹಿಂಡುವ ಕೆಲಸ ಮಾಡುತ್ತೇವೆ. 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳಲ್ಲಿ ತೀವ್ರ ಬರಗಾಲ ಛಾಯೆ ಇದೆ. ಜೂನ್‍ನಲ್ಲಿ ಸಣ್ಣ ಮಳೆ, ಜುಲೈನಲ್ಲಿ ಮಳೆ ಇರಲಿಲ್ಲ. ಆಗಸ್ಟ್‌ನಲ್ಲಿ ಶೇ.73 ಮಳೆ ಕೊರತೆ ಆಗಿದೆ. ರಾಜ್ಯ ಸರ್ಕಾರ, ಸಚಿವರು ಯಾವುದೇ ಕ್ರಮ ಕೈಗೊಳ್ಳದೆ ವಿಧಾನಸೌಧದಲ್ಲಿ ಕುಳಿತು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಇದನ್ನೂ ಓದಿ: ವಿಪಕ್ಷ ನಾಯಕ ಸ್ಥಾನಕ್ಕೆ ಆಕಾಂಕ್ಷಿಯಾಗಿರಲಿಲ್ಲ, ಹೈಕಮಾಂಡ್‌ಗೆ ತಿಳಿಸಿದ್ದೆ: ಬೊಮ್ಮಾಯಿ

bjp jds congress

ಒಂದು ನಯಾಪೈಸೆ ಬಿಡುಗಡೆ ಮಾಡಿಲ್ಲ;
ಮಾತೆತ್ತಿದರೆ ಕೇಂದ್ರ ಸರ್ಕಾರ ಎನ್ನುತ್ತಿದ್ದಾರೆ. ಬರ ಸಂಬಂಧ ನಿಲುವಳಿ ಸೂಚನೆ ಮಂಡಿಸುತ್ತೇವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ಮೊದಲು ಶಿವಮೊಗ್ಗ, ಕೋಲಾರದ ಸಮಸ್ಯೆ ಇತ್ತು. ಬೆಂಗಳೂರಿನಲ್ಲಿ ನಿನ್ನೆ ಶಾಲಾ ಮಕ್ಕಳು ಭಯಭೀತರಾಗಿ, ಪೋಷಕರೂ ಓಡಿ ಹೋಗುವಂತಾಗಿತ್ತು. ಈ ಸರ್ಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ವಿಫಲವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸಚಿವ ಜಮೀರ್ ಅಹ್ಮದ್ ಅವರು ತೆಲಂಗಾಣದಲ್ಲಿ ಬಿಜೆಪಿಯ (BJP) ಹಿಂದೂ ಶಾಸಕರು ಮುಸ್ಲಿಂ ಸ್ಪೀಕರ್‌ಗೆ ದಿನಂಪ್ರತಿ ಸಲಾಂ ಹೊಡೆಯಬೇಕಿದೆ ಎಂಬಂತೆ ಮಾತನಾಡಿದ್ದಾರೆ. ಇದು ಸಂವಿಧಾನವಿರೋಧಿ ಹೇಳಿಕೆ. ಇದನ್ನು ನಾವು ಪ್ರಶ್ನಿಸುತ್ತೇವೆ. ಶಿಕ್ಷಣ ವ್ಯವಸ್ಥೆಯಡಿ ರಾಜಕೀಯ ಮಾಡಿದ್ದನ್ನು ಪ್ರಶ್ನಿಸುತ್ತೇವೆ. ಎನ್‍ಇಪಿ ಅಡಿಯಲ್ಲಿ ತಪ್ಪು ಕಂಡುಹಿಡಿಯುವುದನ್ನು ಪ್ರಶ್ನೆ ಮಾಡುತ್ತೇವೆ. ಒಕ್ಕಲಿಗ ಸಮುದಾಯ, ಲಿಂಗಾಯತ ಸಮುದಾಯ ಮೊದಲಾದವರ ವಿರೋಧದ ನಡುವೆ ಕಾಂತರಾಜ್ ವರದಿ ಅನುಷ್ಠಾನಕ್ಕೆ ಮುಂದಾದುದನ್ನು ಚರ್ಚೆಗೆ ಕೈಗೆತ್ತಿಕೊಳ್ಳಲಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯ ರಾಜಕೀಯ ಒತ್ತಡದ ನಡುವೆ ಕ್ಷೇತ್ರಕ್ಕೆ ಟೈಂ ಕೊಡಲು ಆಗ್ತಿಲ್ಲ: ಡಿಕೆಶಿ

ನೀರಾವರಿ ಯೋಜನೆಗಳ ವಿಚಾರ, ಅನುಷ್ಠಾನದಲ್ಲಿ ವಿಫಲತೆ, ಬಜೆಟ್‍ನಲ್ಲಿ ನೀರಾವರಿಗೆ ಮೋಸ ಮಾಡಿದ್ದನ್ನು ತೆಗೆದುಕೊಳ್ಳುತ್ತೇವೆ. ಪ್ರಮುಖವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿ ಆಗದಿರುವುದು, ನೀರಾವರಿ ಯೋಜನೆಗಳು, ಗ್ಯಾರಂಟಿ ವೈಫಲ್ಯಗಳನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ವಿವರ ನೀಡಿದರು.

Share This Article