ಬೆಳಗಾವಿ: ರಾಮದುರ್ಗದ ವಿಠ್ಠಲಪೇಟೆಯ ಸರ್ಕಾರಿ ಶಾಲಾ ಮಕ್ಕಳಿಗೆ ಪಬ್ಲಿಕ್ ಟಿವಿ ವತಿಯಿಂದ ಶಾಲಾ ಬ್ಯಾಗ್ ಜೊತೆಯಲ್ಲಿ ಅವಶ್ಯಕ ವಸ್ತುಗಳನ್ನು ವಿತರಿಸಲಾಗಿದೆ.
ಜಿಲ್ಲೆಯ ರಾಮದುರ್ಗ ತಾಲೂಕು ಮಲಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿ ಜಲಸಮಾಧಿಯಾಗಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ಪ್ರವಾಹ ಬಂದ ಬಳಿಕದ ಜನರ ಜೀವನದ ಬಗ್ಗೆ ಬುಲೆಟ್ ರಿಪೋರ್ಟರ್ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಮಾಡಿತ್ತು.
ಪ್ರವಾಹಕ್ಕೆ ಸಿಲುಕಿದ್ದ ರಾಮದುರ್ಗದ ವಿಠ್ಠಲಪೇಟೆಯ ಸರ್ಕಾರಿ ಶಾಲಾ ಮಕ್ಕಳ ದಯನೀಯ ಸ್ಥಿತಿಯ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಅದರಲ್ಲಿ ಸ್ವಾತಿ ಎಂಬ ಬಾಲೆ ತನ್ನ ಸ್ಥಿತಿ ಹೇಳಿಕೊಂಡು ಕಣ್ಣೀರಿಟ್ಟಿದ್ದಳು. ಆ ಬಾಲೆಯ ಮೊಗದಲ್ಲಿ ಇಂದು ನಗುವಿದೆ.
ಕಾರಣ ಪಬ್ಲಿಕ್ ಟಿವಿ ವತಿಯಿಂದ ಮಕ್ಕಳಿಗೆ ಶಾಲಾ ಬ್ಯಾಗ್ ಜೊತೆಯಲ್ಲಿ ಅವಶ್ಯಕ ವಸ್ತುಗಳನ್ನು ವಿತರಿಸಲಾಗಿದೆ. ಈ ಮೂಲಕ ಅಂದು ಅತ್ತಿದ್ದ ಪುಟಾಣಿ ಹುಡುಗಿ ಇಂದು ಧನ್ಯತಾ ಭಾವದಿಂದ ನಗುತ್ತಿದ್ದಾಳೆ.