ಬೆಳಗಾವಿ (ಚಿಕ್ಕೋಡಿ): ಓಮ್ನಿ ಕಾರಿನಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ಭಾರೀ ಆತಂಕ ಸೃಷ್ಟಿಸಿದ ಘಟನೆ ತಾಲೂಕಿನ ಸದಲಗಾ ಪಟ್ಟಣದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸದಲಗಾ ಪಟ್ಟಣದ ದಿಲಾಲ್ ಹಕೀಮ್ ಎಂಬವರಿಗೆ ಸೇರಿದ್ದ 15 ವರ್ಷದ ಹಳೆಯ ಓಮ್ನಿ ಇದಾಗಿದ್ದು, ಘಟನೆಯನ್ನು ಹೊತ್ತಿ ಉರಿದಿದೆ. ವಾಹನದಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಓಮ್ನಿ ಕಾರು ರಿಪೇರಿ ಮಾಡಿಸಲು ಮಾಲೀಕ ದಿಲಾಲ್ ಹಕೀಮ್ ಸೇರಿದಂತೆ ಮೂವರು ಪಟ್ಟಣದ ಗ್ಯಾರೆಜ್ಗೆ ಬಂದಿದ್ದರು. ವೇಲ್ಡಿಂಗ್ ಮಾಡಿಸಿಕೊಂಡು ಅಲ್ಲಿಂದ ಮನೆಗೆ ಹೋಗುತ್ತಿದ್ದಾಗ ಕಾರಿನಲ್ಲಿ ಸುಟ್ಟ ವಾಸನೆ ಬಂದಿದೆ. ತಕ್ಷಣವೇ ಎಚ್ಚೆತ್ತುಕೊಂಡ ಮೂವರು ಓಮ್ನಿ ಕಾರನ್ನು ರಸ್ತೆಯಲ್ಲಿಯೇ ಬಿಟ್ಟು ದೂರ ಓಡಿ ಹೋಗಿದ್ದಾರೆ.
ಬೆಂಕಿ ಭಾರೀ ಪ್ರಮಾಣದಲ್ಲಿ ಕಾಣಿಸಿಕೊಂಡು ಬಿಸಿ ಹೆಚ್ಚಾಗಿದ್ದರಿಂದ ಓಮ್ನಿಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡಿತ್ತು. ಅದೃಷ್ಟವಶಾತ್ ಘಟನಾ ಸ್ಥಳದಲ್ಲಿ ಯಾವುದೇ ಮನೆ ಇರಲಿಲ್ಲ. ಅಷ್ಟೇ ಅಲ್ಲದೆ ರಸ್ತೆಯಲ್ಲಿ ವಾಹನ ಸಂಚಾರ ಇರಲಿಲ್ಲ. ಇದರಿಂದಾಗಿ ಭಾರೀ ಅನಾಹುತವೇ ತಪ್ಪಿದೆ. ಸ್ಥಳದಲ್ಲಿದ್ದ ಕೆಲವರು ಸಿಲಿಂಡರ್ ಸ್ಫೋಟದ ದೃಶ್ಯವನ್ನು ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.