ಚಿಕ್ಕೋಡಿ: ಬೆಳಗಾವಿ ಗಡಿಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್ ತಾಲೂಕಿನ ಮಹಿಶಾಳ ಗ್ರಾಮದಲ್ಲಿ ಬರೋಬ್ಬರಿ 19 ಭ್ರೂಣಗಳ ಶವ ಪತ್ತೆಯಾಗಿದ್ದು, ಸುತ್ತಮುತ್ತಲ ಜನ ಬೆಚ್ಚಿಬಿದ್ದಿದ್ದಾರೆ.
ಕಾಗವಾಡದಿಂದ ಮೂರ್ನಾಲ್ಕು ಕಿಲೋ ಮೀಟರ್ ದೂರದಲ್ಲಿರುವ ಈ ಗ್ರಾಮದ ಭಾರತಿ ಆಸ್ಪತ್ರೆಯ ವೈದ್ಯ ಡಾ.ಬಾಬಾಸಾಹೇಬ್ ಕಾನೂನು ಬಾಹಿರವಾಗಿ ಭ್ರೂಣ ಹತ್ಯೆ ಮಾಡ್ತಿರೋದು ಬೆಳಕಿಗೆ ಬಂದಿದೆ.
ಕಳೆದ 9 ವರ್ಷಗಳಿಂದ ಈ ಭಾಗದ ನೂರಾರು ಮಹಿಳೆಯರಿಗೆ ಈತ ಗರ್ಭಪಾತ ಮಾಡಿಸುತ್ತಿದ್ದಾನೆ ಎನ್ನಲಾಗಿದೆ. 2 ದಿನಗಳ ಹಿಂದೆ ಈ ಆಸ್ಪತ್ರೆಗೆ ಗರ್ಭಪಾತ ಮಾಡಿಸಲು ಬಂದ ಮಹಿಳೆ ಮೃತಪಟ್ಟಿದ್ದರು. ಈ ಬಗ್ಗೆ ಆ ಮಹಿಳೆಯ ತಂದೆ ಮೀರಜ್ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಪೊಲೀಸರು ಆ ಮಹಿಳೆಯ ಗಂಡನನ್ನು ವಶಕ್ಕೆ ಪಡೆದು ಆಸ್ಪತ್ರೆ ಮೇಲೆ ದಾಳಿ ನಡೆಸಿ ಅಲ್ಲಿ ಗರ್ಭಪಾತಕ್ಕೆ ಬಳಸುವ ಎಲ್ಲಾ ಸಾಮಗ್ರಿಗಳನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.
ವೈದ್ಯ ಬಾಬಾಸಾಹೇಬ್ ಮಹಿಳೆಯರ ಗರ್ಭಪಾತ ಮಾಡಿ ಗ್ರಾಮದಲ್ಲಿರುವ ಕಾಲುವೆ ಬಳಿಯ ಜಮೀನಿನಲ್ಲಿ ಹೂತಿಡುತ್ತಿದ್ದ. ಪೊಲೀಸರು ಜೆಸಿಬಿ ಮೂಲಕ ಹೂತಿಟ್ಟಿದ್ದ 19ಕ್ಕೂ ಹೆಚ್ಚು ಭ್ರೂಣಗಳನ್ನು ಹೊರ ತೆಗೆದಿದ್ದಾರೆ. ಘಟನೆ ಬಳಿಕ ನಾಪತ್ತೆಯಾಗಿದ್ದ ಆರೋಪಿ ಡಾಕ್ಟರ್ ಬಾಬಾ ಸಾಹೇಬ ಖಿದ್ರಾಪುರೆಯನ್ನು ಇಂದು ಪೊಲೀಸರು ಬಂಧಿಸಿದ್ದಾರೆ.