ಬೆಳಗಾವಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಎದುರೇ ಜಿಲ್ಲೆಯ ಹಲಗಾ ಗ್ರಾಮದ ರೈತರು ಅಧಿಕಾರಿಗಳ ವಿರುದ್ಧ ಕಿಡಿಕಾರಿ, ಕುರ್ಚಿಗಳನ್ನು ಎಸೆದು ಒಡೆದು ಹಾಕಿದ್ದಾರೆ.
ಹಲಗಾ ಗ್ರಾಮದ ರೈತರ ವಿರೋಧದ ನಡುವೆಯೂ ಜಿಲ್ಲಾಡಳಿತದಿಂದ ಒಳಚರಂಡಿ ನೀರು ಶುದ್ಧೀಕರಣ ಘಟಕ ಕಾಮಗಾರಿ ನಡೆಸಲಾಗುತ್ತಿದೆ. ಹೀಗಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇಂದು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಗ್ರಾಮಸ್ಥರು, ಕಾಮಗಾರಿಯನ್ನು ಕೈ ಬಿಡುವಂತೆ ಮನವಿ ಮಾಡಿಕೊಂಡು, ಕಣ್ಣೀರಿಟ್ಟರು. ಆದರೆ ಶಾಸಕರು ಬಂದು ಅರ್ಧ ಗಂಟೆ ಕಳೆದರೂ ಅಧಿಕಾರಿಗಳು ಸ್ಥಳಕ್ಕೆ ಬರಲೇ ಇಲ್ಲ. ಇದು ಗ್ರಾಮಸ್ಥರ ಕೋಪಕ್ಕೆ ಕಾರಣವಾಯಿತು.
Advertisement
Advertisement
ನಮ್ಮ ಜಮೀನು ನೀಡುವುದಿಲ್ಲ ಎಂದು ಜಿಲ್ಲಾಡಳಿತಕ್ಕೆ ತಿಳಿಸಿದ್ದೇವು. ಆದರೆ ಇದನ್ನು ಪರಿಗಣಿಸದ ಜಿಲ್ಲಾಡಳಿತವು ಕಾಮಗಾರಿಗೆ ಮುಂದಾಗಿತ್ತು. ಹೀಗಾಗಿ ಕಳೆದ 6 ದಿನಗಳಿಂದ ಅಧಿಕಾರಿಗಳ ಜೊತೆಗೆ ಸಂಘರ್ಷ ಏರ್ಪಟ್ಟಿತ್ತು. ನಮ್ಮ ಹೋರಾಟಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಸಾಥ್ ನೀಡಿದ್ದರು. ಆದರೆ ಅವರನ್ನು ವಶಕ್ಕೆ ಪಡೆದ ಪೊಲೀಸರು, ಒಂದು ದಿನ ಠಾಣೆಯಲ್ಲಿ ಇರಿಸಿಕೊಂಡಿದ್ದರು ಎಂದು ಹಲಗಾ ಗ್ರಾಮದ ರೈತರು ದೂರಿದ್ದಾರೆ.
Advertisement
ನಮ್ಮ ಜೀವನೋಪಾಯಕ್ಕೆ ಇರುವುದು ಈ ಜಮೀನು ಅಷ್ಟೇ. ಇದನ್ನು ನೀವು ಕಿತ್ತುಕೊಂಡರೆ ನಮ್ಮ ಬದುಕು ಕಷ್ಟವಾಗುತ್ತದೆ. ಬೇರೆ ಎಲ್ಲಿಯಾದರೂ ಒಳಚರಂಡಿ ನೀರು ಶುದ್ಧೀಕರಣ ಘಟಕ ನಿರ್ಮಿಸಿ ದಯವಿಟ್ಟು ಫಲವತ್ತಾದ ಭೂಮಿಯನ್ನು ಬಿಟ್ಟು ಬಿಡಿ ಎಂದು ರೈತರು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
Advertisement
ಕಾಮಗಾರಿಯ ಕುರಿತು ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಏಕಾಏಕಿ ಕಾಮಗಾರಿ ಆರಂಭಿಸಿದ್ದಾರೆ. ಇದರಿಂದಾಗಿ ನಮ್ಮ ಬೆಳೆ ನಾಶವಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ಅಧಿಕಾರಿಗಳು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ರೈತರು ಆರೋಪಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಯಿಂದಾಗಿ ಎಚ್ಚೆತ್ತುಕೊಂಡ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಕಾಮಗಾರಿ ನಿಲ್ಲಿಸಲು ಮುಂದಾಗಿದ್ದರು. ಆದರೆ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಬರದೇ ಬೇಜವಾಬ್ದಾರಿ ತೋರಿದ್ದು ರೈತರ ಆಕ್ರೋಶಕ್ಕೆ ಕಾರಣವಾಯಿತು. ಇದರಿಂದಾಗಿ ಕುರ್ಚಿಗಳನ್ನು ಮುರಿದು ಹಾಕಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ರೈತರನ್ನು ಸಮಾಧಾನ ಪಡಿಸುತ್ತಿದ್ದಾರೆ.