– ಗೋವಾ ಕನ್ನಡಿಗರ ಮನಕಲಕುವ ಕಥೆ
ಬೆಳಗಾವಿ: ಕೊರೊನಾ ವೈರಸ್‍ನಿಂದಾಗಿ ದೇಶದಲ್ಲಿ ಲಾಕ್‍ಡೌನ್ ಘೋಷಣೆ ಆಗಿದೆ. ಇದರಿಂದಾಗಿ ದಿನಗೂಲಿ ಕಾರ್ಮಿಕರ ಪರಿಸ್ಥಿತಿ ಹೇಳತೀರದಂತಾಗಿದೆ. ಅದರಲ್ಲೂ ರಾಜ್ಯದಿಂದ ರಾಜ್ಯ ಗುಳೆಹೋದವರು ಭಾರೀ ಫಜೀತಿಗೆ ಸಿಲುಕಿದ್ದಾರೆ. ಇಂತಹದ್ದೇ ಪರಿಸ್ಥಿತಿಯನ್ನು ಗೋವಾ ಕನ್ನಡಿಗರು ಅನುಭವಿಸುತ್ತಿದ್ದಾರೆ.
ಗೋವಾ ರಾಜ್ಯದ ಶಿವೋಲಿ, ಮಾಪ್ಸಾ ಸೇರಿ ವಿವಿಧ ಕಡೆ ಸಾವಿರಾರು ಕಾರ್ಮಿಕರು ನೆಲೆಸಿದ್ದಾರೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಗೋವಾದಲ್ಲಿ ಪ್ರವಾಸೋದ್ಯಮ, ಕಟ್ಟಡ ನಿರ್ಮಾಣ, ಕಾರ್ಖಾನೆಗಳು ಸೇರಿದಂತೆ ವಿವಿಧ ಔದ್ಯೋಗಿಕ ಕ್ಷೇತ್ರಗಳು ಮುಚ್ಚಿವೆ. ಪರಿಣಾಮ ದಿನಗೂಲಿ ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದು, ಸ್ವಗ್ರಾಮಕ್ಕೆ ಮರಳುತ್ತಿದ್ದಾರೆ. ಗೋವಾ ಸರ್ಕಾರವು ಕನ್ನಡಿಗರಿಗೆ ತರಕಾರಿ ಸೇರಿ ಆಹಾರ ಧಾನ್ಯ ಸೇರಿ ಯಾವುದೇ ಸೌಲಭ್ಯ ಇಲ್ಲ ನೀಡಿಲ್ಲ. ಅಷ್ಟೇ ಅಲ್ಲದೆ ಬಲವಂತವಾಗಿ ಕನ್ನಡಿಗರನ್ನು ರಾಜ್ಯದಿಂದ ಹೊರ ಹಾಕುತ್ತಿದೆ ಎಂಬ ಆರೋಪ ಕೇಳಿಬಂದಿದೆ.
Advertisement
Advertisement
ಎಲ್ಲ ಬೆಳವಣಿಗೆಯಿಂದಾಗಿ ಕನ್ನಡಿಗರು ಗೋವಾದಿಂದ 350 ಕಿ.ಮೀ. ಕಾಲ್ನಡಿಗೆ ಬಂದು ಕರ್ನಾಟಕದ ಗಡಿ ತಲುಪಿದ್ದಾರೆ. ಚಿಕ್ಕ ಮಕ್ಕಳು ಸೇರಿ ನೂರಾರು ಜನ ಕಾರ್ಮಿಕರು ಎರಡು ದಿನಗಳಿಂದ ಊಟ, ತಿಂಡಿ ಇಲ್ಲದೇ ಪರದಾಡಿದ್ದಾರೆ. ಈ ಪೈಕಿ 40ಕ್ಕೂ ಹೆಚ್ಚು ಕನ್ನಡಿಗರನ್ನು ಖಾನಾಪುರ ತಾಲೂಕಿನ ಕಣಕುಂಬಿ ಬಳಿಯ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ತಡೆದಿದ್ದಾರೆ.
Advertisement
ಪೊಲೀಸರು ತಡೆದ ಹಿನ್ನೆಯಲ್ಲಿ ಅವರೆಲ್ಲರೂ ಕಣಕುಂಬಿ ಚೆಕ್ ಪೋಸ್ಟ್ ಬಳಿಯೇ ಶುಕ್ರವಾರ ರಾತ್ರಿ ವಾಸ್ತವ್ಯ ಹೂಡಿದ್ದರು. ಎಲ್ಲರೂ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಬೀದರ್ ಜಿಲ್ಲೆಗೆ ಸೇರಿದವರಾಗಿದ್ದಾರೆ. ಇವರಷ್ಟೇ ಅಲ್ಲದೆ ಇನ್ನೂ 800ಕ್ಕೂ ಹೆಚ್ಚು ಜನರು ಕಾಲ್ನಡಿಗೆ ಮೂಲಕ ರಾಜ್ಯಕ್ಕೆ ವಾಪಸ್ ಆಗುತ್ತಿದ್ದಾರೆ ಎನ್ನಲಾಗುತ್ತಿದೆ.
Advertisement
ರಸ್ತೆಯ ಪಕ್ಕದಲ್ಲೇ ಮಕ್ಕಳನ್ನು ಹಾಕಿಕೊಂಡು ಪೋಷಕರು ಮಲಗಿದ್ದರು. ಮಹಿಳೆಯರು ಕಣ್ಣೀರಿಟ್ಟು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಕೆಲವರಂತೂ ನಮ್ಮೂರಿಗೆ ಹೋಗಲು ಅವಕಾಶ ಮಾಡಿಕೊಡಿ ಎಂದು ಅಂಗಲಾಚಿದರು.