ಚಿಕ್ಕೋಡಿ(ಬೆಳಗಾವಿ): ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರಿಂದ ಸರ್ಕಾರ ಹೇರಲಾದ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳೆ ಬೆಳೆದ ರೈತರ ಮಾರಲಾಗದೆ ಸಂಕಷ್ಟಕೀಡಾಗಿದ್ದು, ಇದೀಗ ರೈತರ ಬೆನ್ನಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಬೆಳಗಾವಿ ಜಿಲ್ಲೆಯ ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ನಿಂತಿದ್ದಾರೆ.
ರೈತರು ಬೆಳೆದ ತರಕಾರಿ, ಹಣ್ಣುಗಳನ್ನು ಖರೀದಿಸಿ ಸಾರ್ವಜನಿಕರಿಗೆ ಹಂಚಿದ್ದಾರೆ. ಯಮನಕಮರಡಿ ಕ್ಷೇತ್ರದ ಹೆಬ್ಬಾಳ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ರೈತ ಹಣುಮಂತ ಎಂಬವರು ಸುಮಾರು ಮೂರು ಎಕರೆ ಪ್ರದೇಶದಲ್ಲಿ ಬೆಳೆದ 30 ಟನ್ ಕಲ್ಲಂಗಡಿ ಹಾಗೂ ಪೇರಳೆ ಹಣ್ಣು ಖರೀದಿಸಿದ್ದಾರೆ.
Advertisement
Advertisement
ಹೀಗೆ ಖರೀದಿಸಿದ ಹಣ್ಣುಗಳನ್ನು ಕೊರೊನಾ ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ಯಮಕನಮರಡಿ ಹಾಗೂ ಬೆಳಗಾವಿ ಜಿಲ್ಲಾ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿಗೆ ಹಂಚಲಾಗುವುದು. ಲಾಕ್ ಡೌನ್ ನಿಂದ ರೈತರು ಬೆಳೆದ ಫಸಲು ಮಾರಾಟ ಮಾಡಲಾಗದೆ ನಾಶಪಡಿಸುತ್ತಿದ್ದು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಣ್ಣು, ತರಕಾರಿ ಖರೀದಿಸಿ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. ಪ್ರತಿಯೊಬ್ಬ ಜನಪ್ರತಿನಿಧಿಗಳು ಇದೇ ರೀತಿ ಮಾಡುವ ಮೂಲಕ ರೈತರ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಶಾಸಕ ಸತೀಶ ಜಾರಕಿಹೊಳಿ ಅವರು ಕರೆ ನೀಡಿದ್ದಾರೆ.
Advertisement
Advertisement
ಮೇ 3ರ ಬಳಿಕ ಲಾಕ್ ಡೌನ್ ಅನ್ನು ಹಂತ ಹಂತವಾಗಿ ತೆರವುಗೊಳಿಸಬೇಕು. ಸಂಪೂರ್ಣ ಬಂದ್ ಮಾಡಲಾಗದು, ಕಾರ್ಖಾನೆ, ಕೃಷಿ ಚಟುವಟಿಕೆಗಳು ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಪರೇಶಗೌಡ, ಹೆಬ್ಬಾಳ ಜಿಪಂ ಸದಸ್ಯ ಮಹಾಂತೇಶ ಮಗದುಮ, ಕಿರಣ ರಜಪೂತ, ಸುಧೀರ್ ಗಿರಿಗೌಡ, ಅಪ್ಪಾಗೌಡ ಪಾಟೀಲ್, ರಾಜು ಅವಟೆ ಸೇರಿದಂತೆ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.