ಚಿಕ್ಕೋಡಿ(ಬೆಳಗಾವಿ): ಹೆರಿಗೆ ನೋವಿನಿಂದ ನರಳುತ್ತಾ ಗಂಟೆಗೂ ಅಧಿಕ ಸಮಯ ಗರ್ಭಿಣಿಯೊಬ್ಬಳು ವೈದ್ಯರಿಗಾಗಿ ಕಾದು ಯಾತನೆ ಅನುಭವಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಭಾನುವಾರ ಸಂಜೆ ಸಮೀಪದ ಐಗಳಿ ಗ್ರಾಮದಿಂದ ತೆಲಸಂಗ ಸರ್ಕಾರಿ ಆಸ್ಪತ್ರೆಗೆ ಕಲಾವತಿ ಗೋಪಾಲ ಬಾಳಪ್ಪಗೋಳ ಹೆರಿಗೆ ನೋವಿನಿಂದ ನರಳುತ್ತಾ ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಇರಬೇಕು. ಆದರೆ ಭಾನುವಾರ ರಜೆ ಇದ್ದ ಕಾರಣ ಆಸ್ಪತ್ರೆಯಲ್ಲಿ ಸಿಪಾಯಿ ಒಬ್ಬರನ್ನ ಬಿಟ್ಟು ಯಾರೂ ಇರಲಿಲ್ಲ. ಹೀಗಾಗಿ ಮಹಿಳೆ ಹೆರಿಗೆ ನೋವಿನಿಂದ ಆಸ್ಪತ್ರೆಯಲ್ಲಿ ನೆಲದ ಮೇಲೆಯೇ ಬಿದ್ದು ಒದ್ದಾಡಿದ್ದಾರೆ.
Advertisement
ಆಸ್ಪತ್ರೆಯಲ್ಲಿದ್ದ ಸಿಪಾಯಿ ಏನೂ ಮಾಡಲಾಗದೆ ವೈದ್ಯರಿಗೆ ಫೋನ್ ಮಾಡಿದ್ದಾನೆ. ಹೆರಿಗೆ ನೋವು ಕ್ಷಣ ಕ್ಷಣಕ್ಕೂ ಹೆಚ್ಚುತ್ತಾ ಹೋಗಿದೆ. ಮಹಿಳೆಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಸುಮಾರು 1 ಗಂಟೆಯ ನಂತರ 20 ಕಿ.ಮೀ ಅಂತರದ ತಿಕೋಟಾ ಗ್ರಾಮದಲ್ಲಿದ್ದ ಸ್ಟಾಪ್ ನರ್ಸ್ ಬಸ್ಸಿನಲ್ಲಿ ಆಸ್ಪತ್ರೆಗೆ ಆಗಮಸಿ 10 ನಿಮಿಷದಲ್ಲಿ ಹೆರಿಗೆ ಮಾಡಿಸಿದ್ದಾರೆ.
Advertisement
Advertisement
ಸ್ಟಾಪ್ ನರ್ಸ್ ಕೊರತೆ: ದಿನದ 24 ಗಂಟೆ ಹೆರಿಗೆ ಆಸ್ಪತ್ರೆ ಇದಾಗಿದ್ದರೂ ಜಿಲ್ಲಾ ಆರೋಗ್ಯಾಧಿಕಾರಿಗಳು ಸ್ಟಾಪ್ ನರ್ಸ್ ಕೊಟ್ಟಿಲ್ಲ. 4 ಜನ ಕೆಲಸ ಮಾಡುವ ಸ್ಥಳದಲ್ಲಿ ಕೇವಲ ಇಬ್ಬರು ಕೆಲಸ ನಿರ್ವಹಿಸುತ್ತಿದ್ದಾರೆ. ಒಬ್ಬರು ರಾತ್ರಿ ಇನ್ನೊಬ್ಬರು ಹಗಲು ಕೆಲಸ ಮಾಡುತ್ತಿದ್ದಾರೆ. ಇವರು ಪ್ರತಿ ಭಾನುವಾರ ಸಿಫ್ಟ್ ಬದಲಾಯಿಸಿಕೊಳ್ಳುತ್ತಾರೆ. ಹೀಗಾಗಿ ರವಿವಾರ ಯಾರೂ ಆಸ್ಪತ್ರೆಗೆ ಆಗಮಿಸಿರಲಿಲ್ಲ.
Advertisement
ತೆಲಸಂಗ ಹೋಬಳಿಯ 32 ಹಳ್ಳಿಯ ಬಡ ಜನತೆಯ ಹೆರಿಗೆಗಾಗಿ ಇದೊಂದೇ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ. ಸದ್ಯಕ್ಕೆ ಅಡಹಳ್ಳಿ, ಐಗಳಿ, ಕಮರಿಯಲ್ಲಿನ ಆಸ್ಪತ್ರೆ ಆಟಕ್ಕುಂಟು ಕೆಲಸಕ್ಕಿಲ್ಲ. ಈ ಮೂರು ಗ್ರಾಮಗಳಲ್ಲಿ ಹೆರಿಗೆಯನ್ನು ನಿಲ್ಲಿಸಲಾಗಿದೆ. ಸಿಬ್ಬಂದಿಯನ್ನು ಕಡಿತಗೊಳಿಸಲಾಗಿದೆ. ಹೀಗಿರುವುದು ಹೆರಿಗೆಗಾಗಿ ಗ್ರಾಮದಲ್ಲಿರುವ ಇದೊಂದೇ ಸರ್ಕಾರಿ ಆಸ್ಪತ್ರೆ ಮಾತ್ರ. ಸದ್ಯಕ್ಕೆ ಇದಕ್ಕೂ ಗ್ರಹಣ ಒಕ್ಕರಿಸಿಕೊಂಡಿದ್ದು ಸಿಬ್ಬಂದಿ ಕೊರತೆಯಿಂದ ಬಡ ಗರ್ಭಿಣಿಯರ ಜೀವದ ಜೊತೆ ಜಿಲ್ಲಾ ಆರೋಗ್ಯ ಇಲಾಖೆ ಆಟವಾಡುತ್ತಿದೆ.
ಅಥಣಿ ಶಾಸಕ ಮಹೇಶ್ ಕುಮಟಳ್ಳಿಯವರ ಸ್ವಗ್ರಾಮ ತೆಲಸಂಗದಲ್ಲಿಯೇ ಹೀಗಾದರೆ ಇನ್ನುಳಿದ ತಾಲೂಕಿನ ಗ್ರಾಮದಳಲ್ಲಿನ ಬಡ ಜನರ ಗತಿ ಏನು ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಶಾಸಕರು ಇತ್ತ ಗಮನಹರಿಸಿ ಆಸ್ಪತ್ರೆಯ ಅವ್ಯವಸ್ಥೆ ಮತ್ತು ಸಿಬ್ಬಂದಿಯ ಕೊರತೆಯನ್ನು ನೀಗಿಸಲಿ ಅನ್ನುವ ಆಸೆ ಜನರದ್ದಾಗಿದ್ದು, ಪದೇ ಪದೇ ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.