ಬೆಳಗಾವಿ(ಚಿಕ್ಕೋಡಿ): ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬವನ್ನ ಎಲ್ಲರೂ ಸಡಗರ ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ ಪ್ರವಾಹ ಸಂತ್ರಸ್ತರು ಕಣ್ಣೀರಲ್ಲೇ ಹಬ್ಬ ಆಚರಿಸುತ್ತಿದ್ದಾರೆ. ಸರ್ಕಾರ ಎಲ್ಲರಿಗೂ ಪರಿಹಾರ ನೀಡಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದೆ. ಆದರೆ ಇತ್ತ ಸಂತ್ರಸ್ತರು ಪರಿಹಾರಕ್ಕಾಗಿ ಅಲೆದಾಡಿ ಕಣ್ಣೀರು ಹಾಕುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ತೀರದ ಪ್ರವಾಹಕ್ಕೆ ಸಿಲುಕಿ ಮನೆಗಳನ್ನ ಕಳೆದುಕೊಂಡಿರುವ ಸಂತ್ರಸ್ತರು ಕಣ್ಣೀರಲ್ಲಿ ಹಬ್ಬ ಆಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಖಜಾನೆಯಲ್ಲಿ ಹಣದ ಕೊರತೆಯಿಲ್ಲ ಎಂದು ಸಿಎಂ ಹೇಳಿಕೊಳ್ಳುತ್ತಿದ್ದಾರೆ. ಆದರೆ ಈ ಭಾಗದ ಸಂತ್ರಸ್ತರಿಗೆ ಯಾವುದೇ ಪರಿಹಾರ ಸಿಗದೇ ಕಣ್ಣೀರು ಹಾಕುತ್ತಿದ್ದಾರೆ. ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ತಮ್ಮ ಚಪ್ಪಲಿ ಸವೆದುಕೊಳ್ಳುತ್ತಿದ್ದಾರೆ. ಸರ್ಕಾರದ ಅಧಿಕಾರಿಗಳು ಮಾತ್ರ ಟೆಕ್ನಿಕಲ್ ಪ್ರಾಬ್ಲಮ್ ಇದೆ ಎಂದು ಸಂತ್ರಸ್ತರನ್ನು ಮನೆಗೆ ಕಳುಹಿಸಿಕೊಡುತ್ತಿದ್ದಾರೆ. ಇದರಿಂದ ಬೇಸತ್ತಿರುವ ಸಂತ್ರಸ್ತರು ಸರ್ಕಾರದ ಖಜಾನೆ ಬಳಿ ಹಣ ಇದೆಯೋ? ಇಲ್ಲವೋ? ಎನ್ನುವ ಸಂಶಯ ವ್ಯಕ್ತಪಡಿಸಿದ್ದಾರೆ.
Advertisement
Advertisement
ಸರ್ಕಾರದ ಬಳಿ ಹಣದ ಕೊರತೆ ಇರುವ ಕಾರಣ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಇದುವರೆಗೂ 10 ಸಾವಿರ ರೂ. ಬಿಟ್ಟು ಬೇರೆ ಪರಿಹಾರ ಸಿಕ್ಕಿಲ್ಲ. ತಮ್ಮ ಸ್ವಂತ ಖರ್ಚಿನಿಂದ ಕೆಲವರು ಸಾಲ ಮಾಡಿಕೊಂಡು ಶೆಡ್ ನಿರ್ಮಾಣ ಮಾಡಿಕೊಂಡಿದ್ದಾರೆ. ಕೆಲವರಿಗೆ ಮಾತ್ರ ಪರಿಹಾರ ಸಿಕ್ಕಿದ್ದು, ಸಂಪೂರ್ಣವಾಗಿ ಮನೆ ಕಳೆದುಕೊಂಡ ಸಾಕಷ್ಟು ಕುಟುಂಬಗಳಿಗೆ ಪರಿಹಾರ ಸಿಕ್ಕಿಲ್ಲ.
Advertisement
Advertisement
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿ, ಕಲ್ಲೋಳ ಕಾಗವಾಡ ತಾಲೂಕಿನ ಜೂಗುಳ, ಮಂಗಾವತಿ ಸೇರಿದಂತೆ ಸಾಕಷ್ಟು ಗ್ರಾಮಗಳಲ್ಲಿ ಅರ್ಧಕ್ಕೂ ಹೆಚ್ಚು ನಿಜವಾದ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯದಿಂದ ಪ್ರವಾಹ ಕಳೆದು ನಾಲ್ಕು ತಿಂಗಳಾದರೂ ಸಂತ್ರಸ್ತರ ಕಣ್ಣೀರಿನ ಕಥೆ ಮುಗಿಯುತ್ತಿಲ್ಲ. ಸಿಎಂ ಯಡಿಯೂರಪ್ಪ ಅವರು ಇನ್ನಾದರೂ ಎಚ್ಚೆತ್ತುಕೊಂಡು ಖಜಾನೆ ತುಂಬಿದ ಕಥೆ ಹೇಳುವುದನ್ನ ಬಿಟ್ಟು ನೆರವಿಗೆ ನಿಲ್ಲಬೇಕು ಎನ್ನುವುದೇ ಸಂತ್ರಸ್ತರ ಆಗ್ರಹವಾಗಿದೆ.