ಚಿಕ್ಕೋಡಿ: ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಜನರು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಥಣಿ ಪಟ್ಟಣದ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಇರುವ ಹೈಮಾಸ್ಟ್ ದೀಪದ ಕಂಬ ಸದ್ಯ ಬೀಳುವ ಸ್ಥಿತಿ ತಲುಪಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಕೇಳಿದರೆ ಪುರಸಭೆ ಅಧಿಕಾರಿಗಳನ್ನು ಕೇಳಿ ಎನ್ನುತ್ತಾರೆ. ಇತ್ತ ಪುರಸಭೆ ಅಧಿಕಾರಿಗಳನ್ನು ಕೇಳಿದರೆ ಹೆಸ್ಕಾಮ್ ಅಧಿಕಾರಿಗಳನ್ನು ಕೇಳಿ ಎನ್ನುವ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಅಧಿಕಾರಗಳ ಬೇಜವಾಬ್ದಾರಿಯಿಂದ ನಿತ್ಯವೂ ಭಯದಲ್ಲೇ ಕಾಲ ಕಳೆಯುತ್ತಿದ್ದೇವೆ ಎಂದು ಸಾರ್ವಜನಿಕರು ಅಸಮಾಧಾನ ಹೊರ ಹಾಕಿದ್ದಾರೆ.
ಹೈಮಾಸ್ಟ್ ವಿದ್ಯುತ್ ಕಂಬದ ಸ್ಥಳಾಂತರದ ಬಗ್ಗೆ ಸದ್ಯ ಗೊಂದಲ ಇರುವುದರಿಂದ ಇಂತಹ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ವಿದ್ಯುತ್ ಕಂಬ ಇರುವ ಶಿವಯೋಗಿ ಸರ್ಕಲ್‍ನಲ್ಲಿ ನೂರಾರು ವಾಹನ ಸವಾರರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ನಿತ್ಯವೂ ಸಂಚರಿಸುತ್ತಾರೆ. ಅಪಘಾತಕ್ಕೆ ಆಹ್ವಾನ ಕೊಡುವ ಸ್ಥಿತಿಯಲ್ಲಿರುವ ವಿದ್ಯುತ್ ಕಂಬ ವಾಲಿಕೊಂಡು ಬೀಳುವ ಸ್ಥಿತಿ ತಲುಪಿದೆ. ಪುರಸಭೆ ಅಥವಾ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಂಬ ಬೀಳುವ ಮುನ್ನವೇ ಎಚ್ಚೆತ್ತುಕೊಂಡು ಸರಿಪಡಿಸಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.