ಬೆಳಗಾವಿ: ನಗರದ ಯುವತಿಯರಿಬ್ಬರು ಮನೆಯಿಂದ ನಾಪತ್ತೆಯಾಗಿದ್ದ ಪ್ರಕರಣ ಸುಖಾಂತ್ಯಗೊಂಡಿದ್ದು, ಮನೆ ಬಿಟ್ಟು ತೆರಳಿದ್ದ ಇಬ್ಬರು ಯುವತಿಯರನ್ನು ಮುಂಬೈ ಮಹಾನಗರಿಯಲ್ಲಿ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಡಿಸೆಂಬರ್ 6 ರಂದು ಯುವತಿಯರಿಬ್ಬರು ಮನೆ ಬಿಟ್ಟು ಹೋಗಿದ್ದರು. ಈ ವಿಷಯ ಬಹಿರಂಗಗೊಳ್ಳುತ್ತಿದಂತೆ ಲವ್ ಜಿಹಾದ್ ರೂಪ ಪಡೆದುಕೊಂಡಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಕೆಲವು ಸಂಘಟನೆಗಳು ಪ್ರತಿಭಟನೆಯನ್ನು ಮಾಡಿದ್ದವು. ಆದರೆ ಮಾರಿಹಾಳ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಯುವತಿಯರನ್ನು ಈಗ ಪತ್ತೆ ಮಾಡಿದ್ದಾರೆ.
Advertisement
ಏನಿದು ಘಟನೆ?
ಇದೇ ತಿಂಗಳ ಡಿಸೆಂಬರ್ 6 ರಂದು ಬೆಳಗಾವಿ ತಾಲೂಕಿನ ಪಂತಬಾಳೇಕುಂದ್ರಿ ಗ್ರಾಮದ ಇಬ್ಬರು ಯುವತಿಯರು ಯಾರಿಗೂ ಹೇಳದೇ ಮನೆಯಿಂದ ನಾಪತ್ತೆಯಾಗಿದ್ದರು. ಈ ವಿಚಾರ ಗ್ರಾಮದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿ ಇದೊಂದು ಲವ್ ಜಿಹಾದ್ ಕೇಸ್ ಎಂಬ ಅನುಮಾನ ಹುಟ್ಟಿಕೊಂಡಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಸ್ಥಳೀಯ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆ ಧರಣಿ ಸಹ ಮಾಡಿದ್ದರು. ಆದರೆ ಈಗ ಈ ಪ್ರಕರಣ ಲವ್ ಜಿಹಾದ್ ಅಲ್ಲ ಮನೆಯವರ ಅನುಮಾನಕ್ಕೆ ತೆತ್ತ ಬೆಲೆ ಎಂಬುದು ಗೊತ್ತಾಗಿದೆ.
Advertisement
Advertisement
ಯುವತಿಯರು ಹೇಳಿದ್ದೇನು?
ನಾಪತ್ತೆಯಾಗಿದ್ದ ರಾಧಿಕಾ (19), ಪ್ರಿಯಾಂಕ (21) ಈ ಬಗ್ಗೆ ಪೊಲೀಸರ ಬಳಿ ಮಾಹಿತಿ ನೀಡಿದ್ದಾರೆ. ಮನೆಯಲ್ಲಿ ನಮ್ಮ ಬಗ್ಗೆ ಪೋಷಕರು ಅನುಮಾನ ದೃಷ್ಟಿಯಿಂದ ನೋಡುತ್ತಿದ್ದರು. ಜೊತೆಗೆ ಎಲ್ಲಿಯೂ ಓಡಾಡಲು, ಯಾರ ಬಳಿ ಮಾತನಾಡಲು ಸ್ವಾತಂತ್ರ್ಯವಿರಲಿಲ್ಲ. ಇದರಿಂದ ಬೇಸರಗೊಂಡು ನಾವೇ ಬದುಕು ಕಟ್ಟಿಕೊಳ್ಳಲು ಮನೆಯಿಂದ ಮುಂಬೈಗೆ ಓಡಿ ಹೋಗಿದ್ದೇವು ಎಂದು ವಿಚಾರಣೆ ವೇಳೆಯಲ್ಲಿ ತಿಳಿಸಿದ್ದಾರೆ.
Advertisement
ಪತ್ತೆಯಾಗಿದ್ದು ಹೇಗೆ?
ಯುವತಿಯರ ನಾಪತ್ತೆ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಮಾರಿಹಾಳ ಪೊಲೀಸರು ಸತತ 6 ದಿನಗಳ ಕಾಲ ಹುಡುಕಾಟ ನಡೆಸಿ ಕೊನೆಗೆ ಯುವತಿಯರನ್ನು ಪತ್ತೆಮಾಡಿ ಕರೆ ತಂದಿದ್ದಾರೆ. ಮನೆಬಿಟ್ಟು ಹೋಗಲು ನಿರ್ಧರಿಸಿದ್ದ ಇಬ್ಬರು ಯುವತಿಯರು ಹತ್ತಿರದ ಸಂಬಂಧಿಗಳಾಗಿದ್ದರು. ಯುವತಿಯರ ಪತ್ತೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಮನೆಯಲ್ಲಿ ದೊರೆತ ಡೈರಿಯನ್ನು ಆಧಾರಿಸಿ ಗೋವಾ, ಬೆಂಗಳೂರು ಸೇರಿದಂತೆ ಹಲವು ಕಡೆ ಹುಡುಕಾಟ ನಡೆಸಿ ಕೊನೆಗೆ ಮುಂಬೈನಲ್ಲಿ ಪತ್ತೆ ಮಾಡಿದ್ದಾರೆ.
ಮನೆ ಬಿಟ್ಟು ತೆರಳಿದ್ದ ಇಬ್ಬರು ಯುವತಿಯರು ಮುಂಬೈ ಮಹಾನಗರದ ಮಾಕ್ಸ್ ಕಂಪೆನಿಯಲ್ಲಿ ಕೆಲಸ ಪಡೆದು, ಎರಡು ದಿನ ಕೆಲಸಕ್ಕೆ ಹೋಗಿದ್ದರು. ಆದರೆ ಮಾರಿಹಾಳ ಪೊಲೀಸ್ ಇನ್ಸ್ ಪೆಕ್ಟರ್ ಜ್ಯೋತಿರ್ಲಿಂಗ ಹೊನಕಟ್ಟಿ ನೇತೃತ್ವದ ತಂಡ ಇವರನ್ನು ಪತ್ತೆ ಮಾಡಿ ಬೆಳಗಾವಿಗೆ ಕರೆ ತಂದಿದ್ದಾರೆ. ಡಿಸಿಪಿ ಸೀಮಾ ಲಾಟ್ಕರ್ ಇಂದು ಯುವತಿಯರ ವಿಚಾರಣೆ ನಡೆಸಿ ಸತ್ಯಾಂಶವನ್ನು ಬಹಿರಂಗಗೊಳಿಸಿದ್ದಾರೆ.
ಯುವತಿ ರಾಧಿಕಾ ಪ್ರತಿಕ್ರಿಯಿಸಿದ್ದು, ನಾವೇ ಮನೆಬಿಟ್ಟು ಹೋಗಿದ್ದು, ನಮ್ಮ ಮನೆಯಲ್ಲಿ ಪ್ರತಿದಿನ ಅನುಮಾನ ಪಡುತ್ತಿದ್ದರು. ಇದರಿಂದ ತುಂಬಾ ಬೇಸರವಾಗಿತ್ತು. ಆದ್ದರಿಂದ ನಾವು ಮನೆ ಬಿಟ್ಟು ಹೋದೆವು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ವಾಪಸ್ ಮತ್ತೆ ಮನೆಗೆ ಕರೆದರೆ ಬರುತ್ತೇವೆ. ಇಲ್ಲವಾದರೆ ಮರಳಿ ಮುಂಬೈಗೆ ಹೋಗುತ್ತೇವೆ ಎಂದು ತಿಳಿಸಿದ್ದಾರೆ. ಆದರೆ ಯುವತಿಯರ ಈ ರೀತಿಯ ವರ್ತನೆಯನ್ನು ಕಂಡು ಪೋಷಕರು ಬೇಸರ ವ್ಯಕ್ತಪಡಿಸಿ ಡಿಸಿಪಿ ಕಚೇರಿಯಲ್ಲಿಯೇ ಯುವತಿಯ ತಂದೆ ಸಿದ್ದಪ್ಪ ಸಾಯಣ್ಣವರ್ ಕಣ್ಣಿರಿಟ್ಟಿದ್ದಾರೆ.