ಉತ್ತರ ಕನ್ನಡ (Uttara Kannada) ಜಿಲ್ಲೆ ಜಲಪಾತಗಳಿಗೆ ಹೆಸರುವಾಸಿಯಾದ ಜಿಲ್ಲೆ. ಮಳೆಗಾಲ ಆರಂಭವಾಯ್ತು ಅಂದ್ರೆ ಇಲ್ಲಿನ ಜಲಪಾತಗಳಿಗೆ (Falls) ಅಪ್ಸರೆಯ ಕಳೆ ಬರುತ್ತದೆ. ಇಲ್ಲಿನ ವಿಶೇಷ ಜಲಪಾತಗಳಿಂದಲೇ ಉತ್ತರಕನ್ನಡಕ್ಕೆ ಜಲಪಾತಗಳ ಜಿಲ್ಲೆ ಎಂಬ ಹೆಸರು ಬಂದಿದೆ.
ಪ್ರಕೃತಿ ಪ್ರಿಯರಿಗೆ ಖುಷಿ ನೀಡುವ ತಾಣಗಳಲ್ಲಿ ಜಲಪಾತಗಳೂ ಒಂದು. ಬೇಸಿಗೆಯಲ್ಲಿ ನೀರಿಲ್ಲದೆ ಸೊರಗಿರುವ ಜಲಪಾತಗಳು ಮಳೆಗಾಲದಲ್ಲಿ ಹೊಸ ಜೀವ ಕಳೆಯೊಂದಿಗೆ ಧುಮ್ಮಿಕ್ಕುವ ಈ ಸೊಬಗನ್ನು ನೋಡುವುದೇ ಕಣ್ಣಿಗೆ ಹಬ್ಬ. ಅದರಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಸುಂದರ ಜಲಪಾತಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಉಂಚಳ್ಳಿ ಜಲಪಾತ
ಉತ್ತರ ಕನ್ನಡದಲ್ಲಿರುವ ಪ್ರಸಿದ್ಧ ಜಲಪಾತಗಳಲ್ಲಿ ಉಂಚಳ್ಳಿ ಜಲಪಾತವೂ (Unchalli Falls) ಒಂದು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಬಳಿ ಅಘನಾಶಿನಿ ನದಿಯಿಂದ ಈ ಜಲಪಾತ ಹುಟ್ಟಿದೆ. ಲುಶಿಂಗ್ಟನ್ ಜಲಪಾತ ಎಂಬ ಹೆಸರು ಸಹ ಇದಕ್ಕಿದೆ. ಈ ಜಲಪಾತವನ್ನು 1845ರಲ್ಲಿ ಮೊದಲು ಗುರುತಿಸಿದ್ದು ಬ್ರಿಟಿಷ್ ಅಧಿಕಾರಿಯಾಗಿದ್ದ ಜೆ.ಡಿ.ಲುಶಿಂಗ್ಟನ್. ಅದೇ ಕಾರಣಕ್ಕೆ ಆತನ ಹೆಸರಿನಿಂದಲೂ ಈ ಜಲಪಾತವನ್ನು ಗುರುತಿಸಲಾಗುತ್ತದೆ.
ಈ ಜಲಪಾತದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರ ವರೆಗೆ ಬಿಸಿಲಿದ್ದಾಗ ಕಾಮನ ಬಿಲ್ಲು ಮೂಡುತ್ತದೆ. ಅದು ನೋಡಲು ಮನಮೋಹಕವಾಗಿರುತ್ತದೆ.

116 ಮೀಟರ್ ಎಂದರೆ 381 ಅಡಿ ಎತ್ತರದಿಂದ ಇಲ್ಲಿ ನೀರು ಬೀಳುತ್ತದೆ. ಚಾರಣಪ್ರಿಯರಿಗೆ, ಪ್ರಕೃತಿ ಪ್ರಿಯರಿಗೆ ಇಷ್ಟವಾಗುವಂತಹ ಜಲಪಾತವಿದು. ಇಲ್ಲಿನ ಪರಿಸರ ಸಹ ಸೊಗಸಾಗಿದೆ. ಉಂಚಳ್ಳಿ ಜಲಪಾತ ಸಿದ್ದಾಪುರದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿದೆ.
ಮಾಗೋಡು ಜಲಪಾತ
ಉತ್ತರ ಕನ್ನಡ ಜಿಲ್ಲೆಯ ಮನಸೆಳೆಯುವ ಮತ್ತೊಂದು ಜಲಪಾತಗಳಲ್ಲಿ ಮಾಗೋಡು (Magodu Falls) ಕೂಡಾ ಒಂದು. ಯಲ್ಲಾಪುರದಿಂದ ಸುಮಾರು 17 ಕಿಲೋಮೀಟರ್ ದೂರದಲ್ಲಿ ಈ ಜಲಪಾತವಿದೆ. ಬೇಡ್ತಿ ನದಿಯು ಇಲ್ಲಿ ಸುಮಾರು 200 ಮೀಟರ್ ಎತ್ತರದಿಂದ ಎರಡು ಹಂತಗಳಲ್ಲಿ ಬೀಳುತ್ತದೆ.

ವರ್ಷದ ಸದಾ ಕಾಲ ಈ ಜಲಪಾತವನ್ನು ವೀಕ್ಷಿಸಬಹುದು. ಮಳೆಗಾಲದಲ್ಲಿ ಮೈದುಂಬಿ ಹೊಸ ಕಳೆಯೊಂದಿಗೆ ಈ ಜಲಪಾತ ಕಂಗೊಳಿಸುತ್ತದೆ. ಇಲ್ಲಿಗೆ ರಸ್ತೆ ಸಂಪರ್ಕವೂ ಉತ್ತಮವಾಗಿದೆ. ಹೀಗಾಗಿ, ಮಾಗೋಡು ಜಲಪಾತ ಸದಾ ಪ್ರವಾಸಿಗರನ್ನು ಕೈಬೀಸಿ ಕರೆಯುವ ತಾಣಗಳಲ್ಲಿ ಒಂದಾಗಿದೆ.
ವಿಭೂತಿ ಫಾಲ್ಸ್
ವಿಭೂತಿ ಜಲಪಾತ (Viboothi Falls) ವಿಭೂತಿ ಹೊಳೆಯ ಸೃಷ್ಟಿಯಾಗಿದೆ. ಅಂಕೋಲಾ ತಾಲೂಕಿನ ಅಚವೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಜಲಪಾತವಿದೆ. ನೂರು ಅಡಿಗೂ ಎತ್ತರದಿಂದ ಈ ಜಲಪಾತ ಧುಮುಕುತ್ತದೆ. ಶಿರಸಿ, ಕುಮಟಾ, ಅಂಕೋಲಾ, ಗೋಕರ್ಣಕ್ಕೆ ಹತ್ತಿರದಲ್ಲಿ ಈ ಜಲಪಾತವಿದೆ. ವಿಶ್ವ ಪ್ರಸಿದ್ಧ ಯಾಣಕ್ಕೂ ಈ ಜಲಪಾತ ಹತ್ತಿರದಲ್ಲಿದೆ.

ವಿಭೂತಿ ಫಾಲ್ಸ್ ಶಿರಸಿಯಿಂದ 40 ಕಿಲೋಮೀಟರ್ ದೂರದಲ್ಲಿದೆ. ರಾಜ್ಯ ಹೆದ್ದಾರಿ 143ರ ಮೂಲಕ ಕೂಡಾ ಇಲ್ಲಿಗೆ ಬರಬಹುದು. ರೈಲಿನಲ್ಲಿ ಬರುವುದಾದರೆ ಕುಮಟಾ ರೈಲು ನಿಲ್ದಾಣ ಹತ್ತಿರದಲ್ಲಿದೆ. ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬಂದು ಇಲ್ಲಿನ ಸೊಬಗನ್ನು ಸವಿಯುತ್ತಿರುತ್ತಾರೆ.
ಸಾತೊಡ್ಡಿ ಜಲಪಾತ
ಯಲ್ಲಾಪುರ ಬಳಿ ಕಲ್ಲರಮನೆ ಘಟ್ಟದ ಬಳಿ ಸಾತೊಡ್ಡಿ ಜಲಪಾತವಿದೆ. ಸುಮಾರು 15 ಮೀಟರ್ ಎಂದರೆ 49.2 ಅಡಿ ಎತ್ತರದಿಂದ ಇಲ್ಲಿ ನೀರು ಧುಮ್ಮಿಕ್ಕುತ್ತದೆ. ಈ ಹೊಳೆ ನಂತರ ಕೊಡಸಳ್ಳಿ ಅಣೆಕಟ್ಟಿನ ಹಿನ್ನೀರಿನಲ್ಲಿ ಕಾಳಿ ನದಿಗೆ ಸೇರುತ್ತದೆ.
ಯಲ್ಲಾಪುರದಿಂದ ಸುಮಾರು 32 ಕಿಮೀ ದೂರದಲ್ಲಿ ಸಾತೊಡ್ಡಿ ಜಲಪಾತವಿದೆ. ಇದನ್ನು `ಮಿನಿ ಜೋಗ’ ಎಂದೂ ಸಹ ಕರೆಯಲಾಗುತ್ತದೆ.

ಬೆಣ್ಣೆಹೊಳೆ ಜಲಪಾತ
ದಟ್ಟ ಹಸಿರು ಕಾಡಿನ ನಡುವೆ ಸುಮಾರು 200 ಅಡಿಗಿಂತಲೂ ಹೆಚ್ಚು ಎತ್ತರದಿಂದ ಈ ಜಲಪಾತ ಧುಮುಕುತ್ತದೆ. ಇದು ಕೂಡಾ ಅಘನಾಶಿನಿ ನದಿಯ ಸೃಷ್ಟಿ.
ಶಿರಸಿಯಿಂದ ಕುಮಟಾ ಕಡೆಗೆ ಹೋಗುವ ದಾರಿಯ ನಡುವೆ ಬೆಣ್ಣೆ ಹೊಳೆ ಜಲಪಾತ ಕಾಣಸಿಗುತ್ತದೆ. ಶಿರಸಿಯಿಂದ ಕುಮಟಾಕ್ಕೆ ಹೋಗುವ ದಾರಿಯಲ್ಲಿ 21 ಕಿಲೋಮೀಟರ್‌ಗಳ ನಂತರ ಕಸಗೆ ಎಂಬ ಸ್ಥಳ ಸಿಗುತ್ತದೆ. ಇಲ್ಲಿಂದ ಸುಮಾರು 6 ಕಿಮೀ ದೂರದಲ್ಲಿ ಈ ಜಲಪಾತವಿದೆ.
ಅಣಶಿ ಜಲಪಾತ
ಕಣ್ಮನ ಸೆಳೆಯುವ ಹಸಿರು, ಬೆಟ್ಟ ಗುಡ್ಡಗಳ ನಡುವೆ ಅಣಶಿ ಜಲಪಾತವಿದೆ. ಕಾರವಾರದ ದಾಂಡೇಲಿ ಮಾರ್ಗದ ಮಧ್ಯ ಈ ಅಣಶಿ ಜಲಪಾತವಿದೆ. ಚಳಿಗಾಲ, ಬೇಸಿಗೆ ಕಾಲದ ಕೆಲ ತಿಂಗಳು ಈ ಜಲಪಾತದಲ್ಲಿ ನೀರಿರುತ್ತದೆ. ಆದರೆ, ಮಳೆಗಾಲದಲ್ಲಿ ಇಲ್ಲಿನ ಸೊಬಗು ಕಣ್ತುಂಬಿಕೊಳ್ಳುವ ಖುಷಿಯೇ ಬೇರೆ.
ಹಾಲ್ನೊರೆಯನ್ನುಕ್ಕಿಸುತ್ತಾ ಧುಮುಕುವ ಈ ಜಲಪಾತ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಕಾರವಾರದಿಂದ ಸುಮಾರು 32 ಕಿಲೋಮೀಟರ್ ದೂರದಲ್ಲಿ ಸುಮಾರು 150 ಅಡಿ ಎತ್ತರದಿಂದ ಧುಮುಕುವ ಅಣಶಿ ಜಲಪಾತವನ್ನು ನೋಡಬಹುದು.
ರಸ್ತೆಯ ಪಕ್ಕದಲ್ಲಿಯೇ ಈ ಜಲಪಾತ ಇರುವುದರಿಂದ ಇಲ್ಲಿಗೆ ಹೋಗಲು ತುಂಬಾ ಕಷ್ಟಪಡಬೇಕಾಗಿಲ್ಲ. ಹೀಗಾಗಿ, ಮಳೆಗಾಲದಲ್ಲಿ ಈ ಜಲಪಾತ ವೀಕ್ಷಣೆಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ.
