ಚಿತ್ರದುರ್ಗ: ಗ್ರಾಮಕ್ಕೆ ನುಗ್ಗಿ ಮೂವರ ಮೇಲೆ ದಾಳಿ ನಡೆಸಿದ್ದ ಕರಡಿಯ ಮೇಲೆ ಗ್ರಾಮಸ್ಥರು ಅಮಾನವೀಯವಾಗಿ ಹಲ್ಲೆ ನಡೆಸಿರುವ ಜಿಲ್ಲೆಯ ದಳವಾಯಿಕಟ್ಟೆ ಗ್ರಾಮದಲ್ಲಿ ನಡೆದಿದೆ.
ಇಂದು ಮಧ್ಯಾಹ್ನದ ವೇಳೆಗೆ ಗ್ರಾಮಕ್ಕೆ ಕರಡಿ ನುಗ್ಗಿತ್ತು. ಆಹಾರ ಹುಡುಕಿಕೊಂಡು ಬಂದಿದ್ದ ಕರಡಿ ಜನರನ್ನು ಕಂಡು ಭಯದಿಂದ ದಾಳಿ ಮಾಡಲು ಆರಂಭಿಸಿ 3 ಜನರನ್ನು ಗಾಯಗೊಳಿಸಿತ್ತು. ಅಲ್ಲದೇ ಗ್ರಾಮದಲ್ಲಿದ್ದ ಹಾಸುಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಘಟನೆಯಲ್ಲಿ ಗ್ರಾಮದ ರಮೇಶ (40), ಉಮೇಶ (35), ಶಶಿ (26) ಗಾಯಗೊಂಡಿದ್ದಾರೆ.
Advertisement
Advertisement
ಕರಡಿ ದಾಳಿಯಿಂದ ಭಯಗೊಂಡಿದ್ದ ಗ್ರಾಮಸ್ಥರು ಕರಡಿಯ ಮೇಲೆ ದೊಣ್ಣೆ ಹಾಗೂ ಕಲ್ಲುಗಳಿಂದ ದಾಳಿ ನಡೆಸಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕರಡಿಯನ್ನು ಅರಣ್ಯಾಧಿಕಾರಿಗಳು ಅರವಳಿಕೆ ಚುಚ್ಚು ಮದ್ದು ನೀಡಿ ರಕ್ಷಣೆ ಮಾಡಿದ್ದಾರೆ. ಬಳಿಕ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯಕ್ಕೆ ರವಾನೆ ಮಾಡಿ ಹೆಚ್ಚಿನ ಚಿಕಿತ್ಸೆಯನ್ನು ನೀಡಿದ್ದಾರೆ.
Advertisement
ಈ ಕುರಿತು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ಗ್ರಾಮಸ್ಥರು, ಕರಡಿ ಗ್ರಾಮ ಪ್ರವೇಶ ಮಾಡಿದ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇವು. ಆದರೆ ಅವರು ಕರಡಿಯನ್ನು ಸೆರೆ ಹಿಡಿಯಲು ಯಾವುದೇ ಸಲಕರಣೆ ಇಲ್ಲದೆ ಬಂದಿದ್ದರು. ಆ ವೇಳೆಗೆ ಗ್ರಾಮಸ್ಥರ ಮೇಲೆ ಕರಡಿ ದಾಳಿ ನಡೆಸಿದ್ದ ಪರಿಣಾಮ ಗ್ರಾಮಸ್ಥರು ಕೋಪದಿಂದ ಕರಡಿ ಮೇಲೆ ದಾಳಿ ನಡೆಸಿದ್ದರು ಎಂದು ತಿಳಿಸಿದರು.
Advertisement
ಈ ಭಾಗದಲ್ಲಿ ಈ ಹಿಂದೆಯೂ ಕರಡಿಗಳು ಗ್ರಾಮಕ್ಕೆ ನುಗ್ಗಿ ಜನರ ಮೇಲೆ ದಾಳಿ ನಡೆಸಿದ್ದ ಪ್ರಕರಣಗಳು ನಡೆದಿವೆ. ಆದರೆ ಅರಣ್ಯಾಧಿಕಾರಿಗಳು ಕರಡಿಗಳು ಗ್ರಾಮಗಳಿಗೆ ನುಗ್ಗದಂತೆ ಯಾವುದೇ ರಕ್ಷಣಾ ಕ್ರಮಗಳನ್ನು ಕೈಗೊಂಡಿಲ್ಲ. ಪರಿಣಾಮ ಮಾನವ ವನ್ಯಜೀವಿಗಳ ನಡುವಿನ ಸಂಘರ್ಷ ಮುಂದುವರಿದಿದೆ. ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.