– ಬಾಡಿಗೆದಾರರ ಬಳಿಯೇ ಹಣ ಪಡೆದು ನಾಪತ್ತೆ
– ಸಿಸಿಬಿಯಿಂದ ಓರ್ವ ಅರೆಸ್ಟ್, ಓರ್ವ ಪರಾರಿ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Bengaluru) ಮನೆ ಬಾಡಿಗೆ ಮತ್ತು ಲೀಸ್ ಪಡೆಯಲು ಹುಡುಕಾಡುತ್ತಿದ್ದೀರಾ? ಹಾಗಾದರೆ ಬಹಳಷ್ಟು ಎಚ್ಚರವಾಗಿರಿ. ಮನೆ ಮಾಲೀಕನ ಬಳಿ ಬಾಡಿಗೆ ಎಂದು ಹೇಳಿ ಬಾಡಿಗೆದಾರರ ಬಳಿ ಲೀಸ್‌ಗೆ ಹಣ ಪಡೆದು ವಂಚನೆ ಎಸಗಿದ ಪ್ರಕರಣಗಳು ಈಗ ಬೆಳಕಿಗೆ ಬಂದಿದೆ.
ಕೋಟ್ಯಂತರ ರೂ. ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯಲ್ಲಿ (CCB) ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಒಬ್ಬನನ್ನು ಬಂಧಿಸಿದ್ದು ಮತ್ತೊಬ್ಬ ಪರಾರಿಯಾಗಿದ್ದಾನೆ.
ಆರೋಪಿಯಾದ ಖಲೀಲ್ ಷರೀಫ್ ಬಂಧನವಾಗಿದ್ದರೆ ಸೈಯದ್ ಅಹಮದ್ ಪರಾರಿಯಾಗಿದ್ದಾನೆ. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾದ ಬೆನ್ನಲ್ಲೇ ಸುಮಾರು 50ಕ್ಕೂ ಹೆಚ್ಚು ಮಂದಿ ಈಗ ಸಿಸಿಬಿ ಆಗಮಿಸಿ ತಮಗೂ ವಂಚನೆಯಾಗಿದೆ ಎಂದು ದೂರು ನೀಡುತ್ತಿದ್ದಾರೆ. ಇದನ್ನೂ ಓದಿ: ಮುರಿದ ಸೀಟ್ ನೀಡಿ ಮೋಸ ಮಾಡಿದ್ದೀರಿ: ಏರ್ ಇಂಡಿಯಾ ವಿರುದ್ಧ ಶಿವರಾಜ್ ಸಿಂಗ್ ಚೌಹಾಣ್ ಕೆಂಡಾಮಂಡಲ
ವಂಚನೆ ಹೇಗೆ?
ಬೆಂಗಳೂರಿಗೆ ಬೇರೆ ಬೇರೆ ಕಡೆಯಿಂದ ಬರುವವರು ಸೇರಿದಂತೆ ಜನ ಮನೆ ಬಾಡಿಗೆ ಮತ್ತು ಲೀಸ್‌ಗೆ ಮನೆ ಬೇಕಾಗಿದೆ ಎಂದು ಒಎಲ್‌ಎಕ್ಸ್ , ನೋ ಬ್ರೋಕರ್ ಸೇರಿದಂತೆ ಹಲವು ಆಪ್‌ಗಳಲ್ಲಿ ಹುಡುಕಾಟ ನಡೆಸುವುದು ಸಾಮಾನ್ಯ.
ಈ ರೀತಿ ಹುಡುಕಾಟ ನಡೆಸುವವರನ್ನೇ ಖಲೀಲ್ ಷರೀಫ್ ಮತ್ತು ಸೈಯದ್ ಅಹಮದ್ ಸಂಪರ್ಕಿಸುತ್ತಿದ್ದರು. ತಮ್ಮ ಅಕ್ರಮ ವ್ಯವಹಾರಕ್ಕೆ ಟ್ಯಾಂಜನೈಟ್ ರಿಯಾಲಿಟಿ ಇಂಡಿಯ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಸಹ ಸ್ಥಾಪಿಸಿದ್ದರು. ಜನರನ್ನು ಸಂರ್ಪಕಿಸುತ್ತಿದ್ದ ಇವರು ಮನೆ ಬಾಡಿಗೆ ಬೇಕಾ? ಲೀಸ್‌ಗೆ ಬೇಕಾ? ನೀವು ಕೇಳಿದ ಜಾಗದಲ್ಲೇ ಕಡಿಮೆ ಬೆಲೆಗೆ ಮನೆ ಕೊಡಿಸುತ್ತೇವೆ ಎಂದು ಹೇಳಿ ನಂಬಿಸುತ್ತಿದ್ದರು.
ಮನೆಯನ್ನು ತೋರಿಸುತ್ತಿದ್ದ ಈ ವಂಚಕರು ಮೂಲ ಮನೆ ಮಾಲೀಕರ ಬಳಿ ಬಾಡಿಗೆಗೆ ಎಂದು ಮಾತಾಡುತ್ತಿದ್ದರು. ಆದರೆ ಬಾಡಿಗೆದಾರರ ಬಳಿ, ಈ ಮನೆ ನಮ್ಮದು ನಾವು ಲೀಸ್‌ಗೆ ಬಿಡುತ್ತಿದ್ದೇವೆ ಎಂದು ಹೇಳಿ 5 ಲಕ್ಷದಿಂದ 30 ಲಕ್ಷ ರೂ.ವರೆಗೆ ಹಣ ಪಡೆದು ನಕಲಿ ದಾಖಲೆ ನೀಡುತ್ತಿದ್ದರು. ಇದನ್ನೂ ಓದಿ: ಎಫ್‌ಬಿಐ ನಿರ್ದೇಶಕನಾದ ಭಾರತೀಯ – ಭಗವದ್ಗೀತೆ ಮೇಲೆ ಕೈಯಿಟ್ಟು ಪ್ರಮಾಣ ಸ್ವೀಕರಿಸಿದ ಕಾಶ್ ಪಟೇಲ್
ಒಂದು ತಿಂಗಳು, ಎರಡು ತಿಂಗಳು ಬಾಡಿಗೆ ಹಣ ಬಾರದೇ ಇದ್ದಾಗ ಮೂಲ ಮಾಲೀಕ ಬಾಡಿಗೆ ಹಣಕ್ಕಾಗಿ ಮನೆ ಹತ್ತಿರ ಬರುತ್ತಿದ್ದ. ಮಾಲೀಕ ಮನೆ ಹತ್ತಿರ ಬಂದಾಗಲೇ ಬಾಡಿಗೆಯಲ್ಲಿದ್ದ ಕುಟುಂಬಕ್ಕೆ ನಾವು ಮೋಸ ಹೋಗಿರುವ ವಿಚಾರ ಗೊತ್ತಾಗುತ್ತದೆ.
ಈ ವೇಳೆ ಮಧ್ಯವರ್ತಿಗಳಾದ ಖಲೀಲ್ ಷರೀಫ್ ಮತ್ತು ಸೈಯದ್ ಅಹಮದ್ ಅವರನ್ನು ಸಂಪರ್ಕಿಸಿದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿರಲಿಲ್ಲ. ಇವರಿಬ್ಬರೂ ರಾಮಮೂರ್ತಿ ನಗರ, ರಾಜಾನುಗುಂಟೆ, ದೇವನಹಳ್ಳಿ, ಕೊತ್ತನೂರು, ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐವತ್ತಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ರೂ. ವಂಚನೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹಲವು ಕಡೆ ಪ್ರಕರಣ ದಾಖಲಾಗುತ್ತಿದ್ದಂತೆ ಈಗ ಈ ಎಲ್ಲಾ ದೂರುಗಳು ಸಿಸಿಬಿಗೆ ವರ್ಗಾವಣೆಯಾಗಿದೆ.