ಬೆಂಗಳೂರು: ಥಣಿಸಂದ್ರದಲ್ಲಿ(Thanisandra) ಎರಡನೇ ದಿನವೂ ತೆರವು ಕಾರ್ಯ ಆರಂಭವಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಪೊಲೀಸ್ (Police) ಭದ್ರತೆಯಲ್ಲಿ ಒತ್ತುವರಿ ತೆರವು ಕಾರ್ಯ ನಡೆಯುತ್ತಿದೆ.
ನೋಟಿಸ್ ನೀಡದೇ ಏಕಾಏಕಿ ತೆರವು ಕಾರ್ಯಾಚರಣೆ ಮಾಡಿದ್ದಕ್ಕೆ ಜನರು ಆಕ್ರೋಶ ಹೊರಹಾಕಿದ್ದಾರೆ. ನಮಗೆ ಮುಂಗಡ ಹಣವೂ ಸಿಕ್ಕಿಲ್ಲ. ನಮ್ಮ ಮುಂಗಡ ಹಣವನ್ನು ನೀಡಿದ್ದರೆ ನಾವು ಬೇರೆ ಮನೆಯನ್ನು ನೋಡಿಕೊಳ್ಳುತ್ತಿದ್ದೆವು ಎಂದು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯ – ಕೇರಳ ಸರ್ಕಾರದ ನಡೆಗೆ ಸಿಎಂ ಸಿದ್ದರಾಮಯ್ಯ ಖಂಡನೆ
ಥಣೀಸಂದ್ರದ ಕೆ.ಆರ್ ಪುರ ಹೋಬಳಿಗೆ ಸೇರಿದ್ದ ಸರ್ವೆ ನಂಬರ್ 28/1 ಹಾಗೂ 28/2 ರ ಎರಡು ಎಕರೆ ಜಾಗವನ್ನು ಕೇಶವ ನಾರಾಯಣ ಕಮಿಟಿ ವರದಿ ಆಧಾರಿಸಿ ಹೈಕೋರ್ಟ್ ತೆರವಿಗೆ ಸೂಚಿಸಿತ್ತು. ಹೈಕೋರ್ಟ್ ಆದೇಶ ಬೆನ್ನಲ್ಲೇ ನಿನ್ನೆಯಿಂದ ಬಿಡಿಎ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸುಮಾರು 10 ವರ್ಷಕ್ಕೂ ಅಧಿಕ ವರ್ಷಗಳಿಂದ ವಾಸವಾಗಿದ್ದೇವೆ. ನಮಗೆ ಯಾವುದೇ ನೋಟಿಸ್ ನೀಡದೇ ತೆರವು ಕಾರ್ಯ ಮಾಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಬಿಡಿಎ ಅಧಿಕಾರಿಗಳ ಮೇಲೆ ಆರೋಪಗಳನ್ನ ಮಾಡಿ ಆಕ್ರೋಶ ಹೊರಹಾಕುತ್ತಿದ್ದಾರೆ. ಇದರಲ್ಲಿ ಅನೇಕ ಮನೆಗಳ ದಾಖಲೆ, ಎ ಖಾತಾ, ವಿದ್ಯುತ್ ಬಿಲ್ ಹಾಗೂ ನೀರಿನ ಬಿಲ್‌ಗಳಿದ್ದು, ನಮಗೆ ಇದು ಸರ್ಕಾರಿ ಜಾಗ ಅಂತ ಮೊದಲೇ ಗೊತ್ತಿರಲಿಲ್ಲ ಎಂದು ತಮ್ಮ ಅಳಲನ್ನ ತೋಡಿಕೊಳ್ಳುತ್ತಿದ್ದಾರೆ.

