ಭದ್ರತಾ ಲೋಪ – ಐಸಿಸಿಗೆ ಖಾರವಾದ ಪತ್ರ ಬರೆದ ಬಿಸಿಸಿಐ

Public TV
2 Min Read
anti India banners fly above Leeds

ಲಂಡನ್: ಇಂಗ್ಲೆಂಡ್‍ನಲ್ಲಿ ನಡೆಯುತ್ತಿರುವ ಈ ಬಾರಿಯ ವಿಶ್ವಕಪ್‍ನಲ್ಲಿ ಮತ್ತೊಂದು ಭದ್ರತಾ ಲೋಪ ಕಂಡು ಬಂದಿದ್ದು, ಈಗ ಈ ವಿಚಾರದ ಬಗ್ಗೆ ಐಸಿಸಿಗೆ ಬಿಸಿಸಿಐ ಖರವಾದ ಪತ್ರ ಬರೆದಿದೆ.

ಶನಿವಾರ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯದ ವೇಳೆ “ಜಸ್ಟಿಸ್ ಫಾರ್ ಕಾಶ್ಮೀರ್” ಎಂಬ ಬ್ಯಾನರ್ ಹೊತ್ತ ವಿಮಾನವೊಂದು ಹೆಡಿಂಗ್ಲೆ ಸ್ಟೇಡಿಯಂ ಮೇಲೆ ಹಾರಾಟ ನಡೆಸಿತ್ತು. ಈಗ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಪಂದ್ಯ ಆರಂಭಗೊಂಡು ಶ್ರೀಲಂಕಾ ತಂಡ ಬ್ಯಾಟ್ ಮಾಡುತ್ತಿರುವ ವೇಳೆ ಈ ವಿಮಾನ ಜಸ್ಟಿಸ್ ಫಾರ್ ಕಾಶ್ಮೀರ್ ಎಂಬ ಘೋಷಣೆ ಇರುವ ಬ್ಯಾನರ್‍ನ್ನು ಹೊತ್ತು ಮೈದಾನದ ಮೇಲೆ ಹಾರಿ ಹೋಗಿತ್ತು. ಇದಾದ ಅರ್ಧಗಂಟೆಯ ನಂತರ ಮತ್ತೆ ಇದೇ ರೀತಿಯ ವಿಮಾನ “ಭಾರತ ನರಮೇಧವನ್ನು ನಿಲ್ಲಿಸು ಕಾಶ್ಮೀರವನ್ನು ಬಿಡು” ಎಂದು ಇನ್ನೂಂದು ಬ್ಯಾನರ್ ಹೊತ್ತು ಹಾರಿ ಹೋಗಿತ್ತು.

ಇದಾದ ಬೆನ್ನಲ್ಲೇ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ಐಸಿಸಿಗೆ ಪತ್ರ ಬರೆಯುವ ಮೂಲಕ ದೂರನ್ನು ನೀಡಿದೆ. ಭಾರತ ಮಂಗಳವಾರ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯ ಆಡಲಿದ್ದು, ಈ ಪಂದ್ಯಕ್ಕೆ ಭದ್ರತೆಯನ್ನು ನೀಡಿ, ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ತಿಳಿಸಿದೆ. ಅಲ್ಲದೆ ಈ ವಿಚಾರದ ಬಗ್ಗೆ ಸರಿಯಾಗಿ ತನಿಖೆಯನ್ನು ಮಾಡಬೇಕು. ಈ ರೀತಿಯ ಘಟನೆಗಳನ್ನು ಒಪ್ಪಲು ಸಾಧ್ಯವೇ ಇಲ್ಲ. ಸೆಮಿಫೈನಲ್‍ನಲ್ಲಿ ಮತ್ತೆ ಈ ರೀತಿಯ ಪ್ರಸಂಗಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ಹೇಳಿದೆ.

bcci

ಇದಕ್ಕೆ ಮರು ಉತ್ತರ ನೀಡಿರುವ ಐಸಿಸಿ, ಕ್ರಿಕೆಟ್‍ನಲ್ಲಿ ರಾಜಕೀಯವನ್ನು ಸಹಿಸುವುದಿಲ್ಲ. ಈಗ ನಡೆದಿರುವ ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಐಸಿಸಿ, ಇದು ದುರದೃಷ್ಟಕರ. ಮತ್ತೆ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರ ವಹಿಸುವುದಾಗಿ ತಿಳಿಸಿದೆ. ಅಲ್ಲದೆ ಎರಡು ಸೆಮಿಫೈನಲ್ ಹಾಗೂ ಫೈನಲ್ ವೇಳೆಯಲ್ಲಿ ಪೊಲೀಸರ ಸಹಾಯದಿಂದ ನಿರ್ದಿಷ್ಟ ವಾಯು ಪ್ರದೇಶದಲ್ಲಿ ವಿಮಾನಗಳು ಹಾರಾಟಕ್ಕೆ ನಿರ್ಬಂಧ ಹೇರಲು ಮುಂದಾಗಿದೆ.

https://twitter.com/AijazAShaikh3/status/1145576272510296064

ಈ ಬಾರಿಯ ವಿಶ್ವಕಪ್‍ನಲ್ಲಿ ನಡೆದ ಎರಡನೆಯ ಘಟನೆ ಇದಾಗಿದ್ದು, ಹತ್ತು ದಿನಗಳ ಹಿಂದೆ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ನಡುವಿನ ಪಂದ್ಯದ ವೇಳೆ “ಜಸ್ಟಿಸ್ ಫಾರ್ ಬಲೂಚಿಸ್ತಾನ” ಎನ್ನುವ ಬ್ಯಾನರ್‍ನೊಂದಿಗೆ ವಿಮಾನವೊಂದು ಹಾರಿತ್ತು. ಇದಾದ ಬೆನ್ನಲ್ಲೇ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ಅಭಿಮಾನಿಗಳ ನಡುವೆ ಜಗಳ ನಡೆದಿತ್ತು. ಬಳಿಕ ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಗೊಳಿಸಿದ್ದರು. ಆ ವಿಮಾನವು ಪಾಕಿಸ್ತಾನದ ಮೂಲದವರೇ ಹೆಚ್ಚಿರುವ ಬ್ರಾಡ್‍ಫೋರ್ಡ್ ಏರ್‍ಪೋರ್ಟ್‍ನಿಂದ ಹಾರಿತ್ತು ಎಂದು ಸ್ಥಳೀಯ ತನಿಖಾ ತಂಡ ನಡೆಸಿದ ತನಿಖೆಯಿಂದ ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *