ಮುಂಬೈ: ನ್ಯೂಜಿಲೆಂಡ್ ಸರಣಿ ಮುಗಿದ ಬಳಿಕ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಪ್ರವಾಸ ನಿಗದಿಯಾಗಿತ್ತು. ಆದರೆ ಇದೀಗ ಓಮಿಕ್ರಾನ್ ಭೀತಿಯಿಂದಾಗಿ ಈ ಪ್ರವಾಸ ರದ್ದಾಗುವ ಸಾಧ್ಯತೆ ಇದೆ ಎಂದು ಮೂಲಗಳಿಂದ ವರದಿಯಾಗಿದೆ.
ತವರಿನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಸರಣಿ ಬಳಿಕ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ನಿಗದಿಯಾಗಿತ್ತು. ದಕ್ಷಿಣ ಆಫಿಕಾ ಪ್ರವಾಸದಲ್ಲಿ ಭಾರತ ತಂಡ 3 ಟೆಸ್ಟ್, 3 ಏಕದಿನ ಮತ್ತು 4 ಟಿ20 ಸರಣಿಗೆ ಈಗಾಗಲೇ ವೇಳಾಪಟ್ಟಿ ಕೂಡ ನಿಗದಿಯಾಗಿದ್ದು, ಡಿಸೆಂಬರ್ 17 ರಿಂದ ಮೊದಲ ಟೆಸ್ಟ್ ಪಂದ್ಯ ಜೋಹನ್‍ಬರ್ಗ್‍ನಲ್ಲಿ ನಿಗದಿಯಾಗಿತ್ತು. ಇದೀಗ ವಿಶ್ವದಾದ್ಯಂತ ಮತ್ತೆ ಕಾಟ ಆರಂಭಿಸಿರುವ ಕೊರೊನಾ ರೂಪಾಂತರಿ ತಲಿ ಓಮಿಕ್ರಾನ್‍ನಿಂದಾಗಿ ಈ ಸರಣಿ ರದ್ದಾಗುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: ಅಮೇರಿಕಾದಲ್ಲಿ ಓಮಿಕ್ರಾನ್ ಮೊದಲ ಪ್ರಕರಣ ಪತ್ತೆ – ದಕ್ಷಿಣ ಆಫಿಕ್ರಾದಿಂದ ಬಂದ ವ್ಯಕ್ತಿಗೆ ಸೋಂಕು
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಓಮಿಕ್ರಾನ್ ನಡುವೆ ಸರಣಿಯಲ್ಲಿ ಭಾರತೀಯ ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಸರಣಿಯನ್ನು ಮುಂದೂಡುವಂತೆ ಕ್ರಿಕೆಟ್ ಸೌತ್ ಆಫ್ರಿಕಾ(CSA) ಜೊತೆ ಮಾತುಕತೆ ನಡೆಸಿದ್ದು, ಮುಂದೂಡಲು ಒಪ್ಪದಿದ್ದರೆ ಸರಣಿ ರದ್ದು ಮಾಡಲು ಚಿಂತಿಸಿದೆ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ. ಈಗಾಗಲೇ ದಕ್ಷಿಣ ಆಫ್ರಿಕಾದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ ಏರಿಕೆ ಕಂಡಿದೆ. ಅದಲ್ಲದೆ 24 ದೇಶಗಳಲ್ಲಿ ಓಮಿಕ್ರಾನ್ ಪತ್ತೆಯಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಇದನ್ನೂ ಓದಿ: OMICRON ಭೀತಿ- 30,000 ಬೆಡ್ ಸಜ್ಜು ಮಾಡಿದ ದೆಹಲಿ ಸರ್ಕಾರ