ಮುಂಬೈ: ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL) 19ನೇ ಆವೃತ್ತಿಯಲ್ಲಿ ಸ್ಟಾರ್ ಆಟಗಾರರ ಹನಿಟ್ರ್ಯಾಪ್‌ಗೆ (Honey Trap) ಸಂಚು ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ.
ಹೌದು. ಟಿ20 ಲೀಗ್‌ನಲ್ಲಿ ಪಾಲ್ಗೊಂಡಿರುವ ಆಟಗಾರರು ಮತ್ತು ಅಧಿಕಾರಿಗಳ ವಿರುದ್ಧ ಲೈಂಗಿಕ ದುರ್ನಡತೆ ಸೇರಿದಂತೆ ಗಂಭೀರ ಆರೋಪಗಳನ್ನ ಹೊರಿಸುವ ಯತ್ನ ನಡೆಯುತ್ತಿದೆ. ಈ ಪ್ರಯತ್ನವನ್ನು ತಡೆಯುವುದಕ್ಕಾಗಿ ಬಿಸಿಸಿಐ (BCCI) ಕಠಿಣ ನಿಲುವು ಕೈಗೊಂಡಿದೆ. ಎಲ್ಲಾ ಆಟಗಾರರ ಮೇಲೆ ಎಚ್ಚರಿಕೆ ವಹಿಸಲು ಎಲ್ಲಾ ಫ್ರಾಂಚೈಸಿಗಳಿಗೆ 7 ಪುಟಗಳ ಮಾರ್ಗಸೂಚಿ ಹೊರಡಿಸಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ದೇವಜಿತ್ ಸೈಕಿಯಾ (Devajit Saikia), ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳಿಗೂ ಸಂಭಾಭ್ಯ ಹನಿಟ್ರ್ಯಾಪ್ ಸ್ಕೆಚ್ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಆಟಗಾರರ ಹೋಟೆಲ್ ಕೊಠಡಿಗಳಿಗೆ ಅನಿರೀಕ್ಷಿತವಾಗಿ ತಪಾಸಣೆ ನಡೆಸಲಾಗುತ್ತದೆ. ಯಾವುದೇ ಉಲ್ಲಂಘನೆಯನ್ನು ಕಠಿಣವಾಗಿ ಪರಿಗಣಿಸಲಾಗುತ್ತದೆ. ಆದ್ದರಿಂದ ಎಲ್ಲಾ ಫ್ರಾಂಚೈಸಿಗಳು (IPL Franchise) ಎಲ್ಲ ಸಂರ್ಭದಲ್ಲೂ ಅಪಾಯಗಳನ್ನು ತಡೆಯುವ ನಿಟ್ಟಿನಲ್ಲಿ ಜಾಗರುಕರಾಗಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ವಿಶೇಷ ಕಾರ್ಯಪಡೆ
ಹನಿಟ್ರ್ಯಾಪ್ ಯತ್ನ ಆರೋಪ ಕೇಳಿಬಂದ ಹಿನ್ನೆಲೆ ಆಟಗಾರರ ಹೋಟೆಲ್ ಕೊಠಡಿಗಳ ತಪಾಸಣೆ ನಡೆಸಲು ಬಿಸಿಸಿಐ ಹಾಗೂ ಐಪಿಎಲ್ ಮಂಡಳಿ ಸದಸ್ಯರನ್ನೊಳಗೊಂಡ ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಒಂದು ವೇಳೆ ಯಾವುದೇ ಆಟಗಾರರ ಕೊಠಡಿಯಲ್ಲಿ ಅನಧಿಕೃತ ಪ್ರವೇಶವಿದ್ದರೆ, ಹೊರಗಿನವರು ಬಂದಿರುವುದು ಕಂಡುಬಂದ್ರೆ, ಅಂತಹವರ ವಿರುದ್ಧ ಬಲವಾದ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ, ಜೊತೆಗೆ ಶಿಕ್ಷೆಗೂ ಗುರಿಯಾಗುತ್ತಾರೆ ಎಂದು ಬಿಸಿಸಿಐ ಮಾರ್ಗಸೂಚಿಯಲ್ಲಿ ವಿವರಿಸಿದೆ.

ಇನ್ನೂ ಆಟಗಾರ ಭೇಟಿಗೆ ಬರುವ ಅತಿಥಿಗಳು ಮತ್ತು ಹೋಟೆಲ್‌ನಲ್ಲಿ ಚಲನವಲನಗಳ ಬಗ್ಗೆ ದಾಖಲೆಗಳನ್ನು ಫ್ರಾಂಚೈಸಿ ವ್ಯವಸ್ಥಾಪಕರು ನಿರ್ವಹಿಸಬೇಕಾಗುತ್ತದೆ. ಯಾವುದೇ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಸದಸ್ಯರು ತಂಡದ ಹೋಟೆಲ್‌ನಿಂದ ಯಾವುದೇ ಸಮಯದಲ್ಲಿ ಹೊರಡುವ ಮೊದಲು ಭದ್ರತಾ ಸಂಪರ್ಕ ಅಧಿಕಾರಿ (SLO) ಅಥವಾ ತಂಡದ ಸಮಗ್ರತೆ ಅಧಿಕಾರಿ (TIO) ಮಾಹಿತಿ ನೀಡಬೇಕಾಗುತ್ತೆ. ಬಿಸಿಸಿಐ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದರೆ, ಶಿಸ್ತುಕ್ರಮದೊಂದಿಗೆ ಕಾನೂನು ಕ್ರಮಕ್ಕೂ ಒಳಗಾಗಲಿದ್ದಾರೆ ಎಂದು ಸೈಕಿಯಾ ಎಚ್ಚರಿಕೆ ನೀಡಿದ್ದಾರೆ.

