ನವದೆಹಲಿ: ಬಿಸಿಸಿಐ(BCCI) ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly) ಮತ್ತು ಕಾರ್ಯದರ್ಶಿ ಜಯ್ ಶಾ(Jay Shah) ಅವರಿಗೆ ಸುಪ್ರೀಂ ಕೋರ್ಟ್(Supreme Court) ಬಿಗ್ ರಿಲೀಫ್ ನೀಡಿದೆ. ಬಿಗ್ ರಿಲೀಫ್ ನೀಡಿದ ಬೆನ್ನಲ್ಲೇ ಗಂಗೂಲಿ ಐಸಿಸಿ(ICC) ಮುಖ್ಯಸ್ಥ ಪಟ್ಟ ಏರುವ ಸಾಧ್ಯತೆ ಹೆಚ್ಚಾಗಿದೆ.
ಬಿಸಿಸಿಐ ಬೈಲಾ(Constitution) ತಿದ್ದುಪಡಿಗೆ ಸುಪ್ರೀಂ ಕೋರ್ಟ್ ನ್ಯಾ.ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ಹಿಮಾ ಕೊಹ್ಲಿ ಅವರಿದ್ದ ಪೀಠ ಅನುಮತಿ ನೀಡಿದೆ. ಈಗ ಕೋರ್ಟ್ ಕೂಲಿಂಗ್ ಆಫ್ ಅವಧಿಯ(Cooling Off Period) ನಿಯಮವನ್ನು ರದ್ದುಗೊಳಿಸಿಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸೌರವ್ ಗಂಗೂಲಿ ಮತ್ತು ಜಯ್ ಶಾ ಅವರ ಅಧಿಕಾರ ಅವಧಿ ಮೂರು ವರ್ಷ ವಿಸ್ತರಣೆಯಾಗಲಿದೆ. ಗಂಗೂಲಿ ಮತ್ತು ಜಯ್ ಶಾ ಅವರ ಅಧಿಕಾರ ಅವಧಿ ಕಳೆದ ತಿಂಗಳಿಗೆ ಕೊನೆಯಾಗಿತ್ತು.
Advertisement
Advertisement
ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ 6 ವರ್ಷ, ಬಿಸಿಸಿಐನಲ್ಲಿ 6 ವರ್ಷಗಳನ್ನು ಒಳಗೊಂಡಂತೆ ಸತತ 12 ವರ್ಷಗಳ ಕಾಲ ಅಧಿಕಾರಾವಧಿಯನ್ನು ಹೊಂದಬಹುದು. ಒಬ್ಬ ಪದಾಧಿಕಾರಿಯು ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಸತತ ಎರಡು ಅವಧಿಗೆ ನಿರ್ದಿಷ್ಟ ಹುದ್ದೆಯಲ್ಲಿ ಸೇವೆ ಸಲ್ಲಿಸಬಹುದು. ಈ ಅವಧಿ ಪೂರ್ಣಗೊಂಡ ಬಳಿಕ ಅವರು ಮೂರು ವರ್ಷಗಳ ಕೂಲಿಂಗ್-ಆಫ್ ಅವಧಿಯನ್ನು ಪೂರೈಸಬೇಕಾಗುತ್ತದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಇದನ್ನೂ ಓದಿ: ಮೋದಿ, ಶಾ ಜೊತೆ ಗಂಗೂಲಿ ಚರ್ಚೆ – ರಾಜಕೀಯ ಇನ್ನಿಂಗ್ಸ್ ಆಡ್ತಾರಾ ದಾದಾ?
Advertisement
ಏನಿದು ಕೂಲಿಂಗ್ ಆಫ್ ಅವಧಿ?
ಸುಪ್ರೀಂ ಕೋರ್ಟ್ ನೇಮಕ ಮಾಡಿದ ನ್ಯಾ.ಲೋಧಾ ಸಮಿತಿ ಶಿಫಾರಸ್ಸಿನ ಅನ್ವಯ ಬಿಸಿಸಿಐ ಬೈಲಾ ಪ್ರಕಾರ ರಾಜ್ಯ ಕ್ರಿಕೆಟ್ ಸಂಸ್ಥೆ ಇಲ್ಲವೇ ಬಿಸಿಸಿಐ ಆಡಳಿತದಲ್ಲಿ ಎರಡು ಸತತ ಅವಧಿಗಳ ನಡುವೆ ಕಡ್ಡಾಯವಾಗಿ 3 ವರ್ಷ ಬಿಡುವು ಪಡೆಯಬೇಕು. ಒಬ್ಬರೇ ದೀರ್ಘ ಸಮಯ ಅಧಿಕಾರದಲ್ಲಿ ಇದ್ದರೆ ಅಧಿಕಾರದ ದುರುಪಯೋಗವಾಗಬಹುದು ಎಂಬ ಕಾರಣಕ್ಕೆ 3 ವರ್ಷಗಳ ಕೂಲಿಂಗ್ ಆಫ್ ಅವಧಿಯ ನಿಯಮ ಜಾರಿಗೆ ತರಲಾಗಿತ್ತು. ಆದರೆ ಈ ನಿಯಮಕ್ಕೆ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬಿಸಿಸಿಐ ತಿದ್ದುಪಡಿ ತಂದಿತ್ತು. ತಿದ್ದುಪಡಿ ಮಾಡಿದ್ದನ್ನು ಮಾನ್ಯ ಮಾಡಬೇಕೆಂದು ಕೋರಿ ಸುಪ್ರೀಂನಲ್ಲಿ ಗಂಗೂಲಿ ಮತ್ತು ಜಯ್ ಶಾ ಅರ್ಜಿ ಸಲ್ಲಿಸಿದ್ದರು.
Advertisement
ಬಿಸಿಸಿಐ ಅಧ್ಯಕ್ಷ ಪಟ್ಟವನ್ನು ಏರುವ ಮೊದಲು ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಗಂಗೂಲಿ, ಗುಜರಾತ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಶಾ ತಲಾ 3 ವರ್ಷ ಅಧಿಕಾರ ಅನುಭವಿಸಿದ್ದರು. ಇದನ್ನೂ ಓದಿ: 6 ವಾರದೊಳಗೆ ಸರ್ಕಾರಿ ಬಂಗಲೆಯನ್ನು ತೊರೆಯಿರಿ – ಸುಬ್ರಮಣಿಯನ್ ಸ್ವಾಮಿಗೆ ಕೋರ್ಟ್ ಗಡುವು
ಐಸಿಸಿಗೆ ದಾದಾ?
ಐಸಿಸಿ ಮುಖ್ಯಸ್ಥ ಚುನಾವಣೆಗೆ ಸ್ಪರ್ಧಿಸಬೇಕಾದರೆ ದೇಶದ ಕ್ರಿಕೆಟ್ ಬೋರ್ಡ್ ಸಂಸ್ಥೆಯ ಅಧ್ಯಕ್ಷರಾಗಿರಬೇಕು ಎಂಬ ನಿಯಮವಿದೆ. ಹೀಗಾಗಿ ಬಿಸಿಸಿಐ ಅಧ್ಯಕ್ಷರಾಗದೇ ಇದ್ದಲ್ಲಿ ಗಂಗೂಲಿ ಐಸಿಸಿ ಅಧ್ಯಕ್ಷ ಸ್ಪರ್ಧೆಯಿಂದಲೇ ಹೊರಗುಳಿಯಬೇಕಾಗಿತ್ತು. ಈಗ ಸುಪ್ರೀಂ ಬಿಗ್ ರಿಲೀಫ್ ನೀಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಸಿಸಿಐ ಪ್ರಭಾವ ಬಹಳ ಇರುವುದರಿಂದ ಮುಖ್ಯಸ್ಥ ಸ್ಥಾನಕ್ಕೆ ಗಂಗೂಲಿ ಸ್ಪರ್ಧಿಸಿದರೆ ಬಹುತೇಕ ದೇಶಗಳು ಬೆಂಬಲಿಸುವ ಸಾಧ್ಯತೆಯಿದೆ.
ಈ ಮೊದಲು ಐಸಿಸಿಯ ಮುಖ್ಯಸ್ಥ ಹುದ್ದೆಗೆ ಏರುವ ಅಭ್ಯರ್ಥಿ 2/3 ಬಹುಮತ ಪಡೆಯಬೇಕೆಂಬ ನಿಯಮ ಇತ್ತು. ಆದರೆ ಈಗ ನಿಯಮ ಬದಲಾಗಿದ್ದು ಶೇ.51 ರಷ್ಟು ಮತ ಪಡೆದ ವ್ಯಕ್ತಿ ಐಸಿಸಿಯ ಮುಖ್ಯಸ್ಥನಾಗಲು ಸಾಧ್ಯವಿದೆ. ಒಟ್ಟು 16 ನಿರ್ದೇಶಕರ ಪೈಕಿ 9 ಮತ ಪಡೆದರೂ ಐಸಿಸಿ ಬಾಸ್ ಸ್ಥಾನವನ್ನು ಅಲಂಕರಿಸಬಹುದಾಗಿದೆ.