ಬೆಂಗಳೂರು: ಬೆಳಗ್ಗೆಯಿಂದ ಪಟ್ಟು ಬಿಡದೆ, ಬಿಬಿಎಂಪಿ ಆವರಣದಲ್ಲಿ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ನಡೆಸಿದ ಪ್ರತಿಭಟನೆಗೆ ಬಿಬಿಎಂಪಿ ಮಣಿದಿದೆ.
ಹಲವು ನಿಯಮಗಳನ್ನು ಸಡಿಲಿಕೆ ಮಾಡಿ, ಮೌಖಿಕ ಭರವಸೆ ನೀಡಿದೆ. ವಾರ್ಡಿಗೆ ಒಂದೇ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಇದ್ದ ನಿಯಮ ಸಡಿಲಿಕೆ ಮಾಡಿದೆ. ಅಲ್ಲದೆ ಮಂಡಳಿಗಳು ಬೇಡಿಕೆ ಇಡುವ ಕಲ್ಯಾಣಿಗಳಲ್ಲಿ ವಿಸರ್ಜನೆಗೆ ವ್ಯವಸ್ಥೆ ಮಾಡಲು ಪಾಲಿಕೆ ಒಪ್ಪಿದೆ.
Advertisement
Advertisement
ಸಮಿತಿ ಜೊತೆಗೆ ಹಲವು ಸುತ್ತಿನ ಸಭೆ ನಡೆಸಿದ ಬಳಿಕ ಬಿಬಿಎಂಪಿ ವಿಶೇಷ ಆಯುಕ್ತರು ತಮ್ಮ ನಿರ್ಧಾರ ತಿಳಿಸಿದರು. ಈ ಬಗ್ಗೆ ಮಾತನಾಡಿದ ವಿಶೇಷ ಆಯುಕ್ತರಾದ ರಂದೀಪ್, ವಾರ್ಡಿಗೊಂದೇ ಮೂರ್ತಿ, ನಾಲ್ಕಡಿ ಎತ್ತರದವರೆಗೆ ಮಾತ್ರ ಮೂರ್ತಿ ಪ್ರತಿಷ್ಠಾಪನೆ ಬಗ್ಗೆ ಇದ್ದ ನಿಯಮ ಪಾಲಿಸಲು ಕಷ್ಟ ಎಂದು ಹಲವು ಸಮಿತಿ ಮನವಿ ಮಾಡಿಕೊಂಡಿದೆ. ಈ ಹಿನ್ನೆಲೆ ಎಲ್ಲಾ ವಲಯ ಜಂಟಿ ಆಯುಕ್ತರು, ಪೊಲೀಸ್ ವರಿಷ್ಠರ ಜೊತೆ ವೀಡಿಯೋ ಕಾನ್ಫರೆನ್ಸ್ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
Advertisement
Advertisement
ಈಗಾಗಲೇ 140 ವಾರ್ಡ್ ಗಳಲ್ಲಿ ಒಂದು ಮೂರ್ತಿಗೆ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ. ಉಳಿದಂತೆ 20-30 ವಾರ್ಡ್ ಗಳಲ್ಲಿ ಒಂದಕ್ಕಿಂತ ಹೆಚ್ಚಿನ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ. ಒಂದಕ್ಕಿಂದ ಹೆಚ್ಚಿನ ಮೂರ್ತಿ ಪ್ರತಿಷ್ಠಾಪನೆಗೆ ಪಾಲಿಕೆ ಮೌಖಿಕ ಆಸ್ತು ನೀಡಿದೆ. ಈ ಬೇಡಿಕೆಯನ್ನು ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡಿದ್ದೇವೆ. ಸಾರ್ವಜನಿಕರಿಗೆ ಯಾವುದೇ ಧಕ್ಕೆ ಆಗದೆ ರೀತಿಯಲ್ಲಿ ಸುವ್ಯವಸ್ಥಿತ ಆಚರಣೆಗೆ ಪಾಲಿಕೆ ಸಮಿತಿ ಜೊತೆ ಕೈ ಜೋಡಿಸಲಿದೆ. ಸ್ಥಳಕ್ಕೆ ಮಾರ್ಷಲ್ಸ್ , ಪೊಲೀಸರನ್ನು ಕಳುಹಿಸಿ ಆಯೋಜಕರಿಗೆ ತೊಂದರೆ ಕೊಡುವುದಿಲ್ಲ. ಕೋವಿಡ್ ನಿಯಮ ಪಾಲಿಸಿ ಆಚರಿಸುವುದು ಕಡ್ಡಾಯ ಎಂದು ತಿಳಿಸಿದರು.
ಹೆಚ್ಚುವರಿ ಕಲ್ಯಾಣಿ, ಅಥವಾ ಪಾರಂಪರಿಕ ಸ್ಥಳಗಳಲ್ಲಿ ವಿಸರ್ಜನೆಗೆ ಅವಕಾಶದ ಬೇಡಿಕೆ ಇಟ್ಟರೆ ಪಾಲಿಕೆ ಕ್ರಮಕೈಗೊಳ್ಳಲಿದೆ. ಇದಕ್ಕೆ ಸ್ಥಳೀಯವಾಗಿ ಮಂಡಳಿಗಳ ಮೂಲಕ ಮನವಿ ಕೊಡಬಹುದು ಎಂದರು. ಇದನ್ನೂ ಓದಿ: 9 ದಿನ ಗಣೇಶೋತ್ಸವ ಆಚರಿಸುತ್ತೇವೆ ತಾಖತ್ ಇದ್ರೆ ಸರ್ಕಾರ ತಡೆಯಲಿ: ಶ್ರೀರಾಮಸೇನೆ
ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಜು ಪ್ರತಿಕ್ರಿಯೆ ನೀಡಿ, ನಾಳೆಯಿಂದ ಯಾವೆಲ್ಲ ಸಾರ್ವಜನಿಕ ಸಮಿತಿಗಳು ಎಷ್ಟು ದಿನ ಗಣೇಶೋತ್ಸವ ಆಚರಿಸುತ್ತಾರೋ ಅವರಿಗೆ ಯಾವುದೇ ಅಡ್ಡಿ ಮಾಡಬಾರದು. ಎಲ್ಲಾ ಕಲ್ಯಾಣಿಗಳಲ್ಲಿ ವಿಸರ್ಜನೆಗೆ ಅವಕಾಶ ಕೊಟ್ಟಿರುವುದಕ್ಕೆ ಸ್ವಾಗತ ಮಾಡ್ತೇವೆ. ಯಾವುದೇ ಸಮಿತಿ ಐದು ದಿನ ಆಚರಿಸಬಹುದೆಂದು ಸರ್ಕಾರ ಅನುಮತಿಸಿದೆ. ಆದರೆ ಯಾವ ಐದು ದಿನ ಎಂದು ತಿಳಿಸಿಲ್ಲ. ಹೀಗಾಗಿ ಚೌತಿಯಿಂದ ಚತುರ್ಥಿಯವರೆಗೆ ಆಯಾ ಸಮಿತಿಗಳು ಅತ್ಯಂತ ಸಂಭ್ರಮದಿಂದ, ಕೋವಿಡ್ ನಿಯಮದೊಂದಿಗೆ ಆಚರಣೆ ಮಾಡ್ತೇವೆ. ಒಂದೇ ಒಂದು ಹುಡುಗನನ್ನು ಪೊಲೀಸ್ ಠಾಣೆಯಲ್ಲಿ ಕೂರಿಸಿದರೆ ಸಮಿತಿ ಉಗ್ರ ಹೋರಾಟ ಮಾಡಲಿದೆ. ಈ ವರ್ಷ ನಿಮ್ಮ ಇಚ್ಛೆಯಂತೆ ಸಾರ್ವಜನಿಕ ಗಣೇಶೋತ್ಸವ ಆಚರಿಸಬಹುದು ಎಂದು ಕರೆ ನೀಡಿದರು. ಸರ್ಕಾರದ ಜೊತೆ ಇಂದು ರಾತ್ರಿಯೊಳಗೆ ಚರ್ಚೆ ಮಾಡಿ ಪರಿಷ್ಕೃತ ಮಾರ್ಗಸೂಚಿ ಹೊರಬೀಳಲಿದೆ ಎಂದರು.