ಬೆಂಗಳೂರು: ಇನ್ನು ಮುಂದೆ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಹಾಕಿದರೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ನಗರದಲ್ಲಿ ಯಾರಾದರೂ ಫ್ಲೆಕ್ಸ್ ಹಾಗೂ ಬ್ಯಾನರ್ ಹಾಕಿದರೆ ಅವರ ವಿರುದ್ಧ ಕ್ರಮಿನಲ್ ಪ್ರಕರಣ ದಾಖಲು ಮಾಡಿ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ.
ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಗಳನ್ನು ಹಾಕಿದ್ದು, ಅವುಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ ನೀಡಿದ್ದ ಮೌಖಿಕ ಖಡಕ್ ಆದೇಶಕ್ಕೆ ಬಿಬಿಎಂಪಿ ತತ್ತರಿಸಿ ಕೊನೆಗೂ ಎಚ್ಚೆತ್ತುಕೊಂಡಿದೆ.
Advertisement
ಕೆಲವು ಸಾರ್ವಜನಿಕ ಸಭೆ, ಸಮಾರಂಭಗಳ ವೇಳೆ ಬಾವುಟ, ಫ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ಬಳಕೆ ಮಾಡಲಾಗುತ್ತದೆ. ಹೀಗಾಗಿ ವಿವಿಧ ರಾಜಕೀಯ ಪಕ್ಷಗಳಿಗೂ ಆಯುಕ್ತರು, ಅನಧಿಕೃತವಾಗಿ ಬ್ಯಾನರ್ ಹಾಗೂ ಫ್ಲೆಕ್ಸ್ ಬಳಕೆ ಮಾಡಬಾರದು. ಒಂದು ವೇಳೆ ನಿಯಮ ಉಲ್ಲಂಘಿಸಿ ನಡೆದುಕೊಂಡರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಪತ್ರದ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ.
Advertisement
ಶಿಕ್ಷೆ ಏನು?
ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ 1976 ಮತ್ತು ಕರ್ನಾಟಕ ಓಪನ್ ಪ್ಲೇಸಸ್ (ಪ್ರಿವೆನ್ಶೆನ್ ಆಫ್ ಡಿಸ್‍ಫಿಗರ್ ಮೆಂಟ್) ಕಾಯ್ದೆ 1981ರ ಅಡಿಯಲ್ಲಿ ಕ್ರಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಹೀಗಾಗಿ ತಪ್ಪಿತಸ್ಥರಿಗೆ 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ಒಂದು ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಕೆಲವು ಪ್ರಕರಣದಲ್ಲಿ ಜೈಲು ಶಿಕ್ಷಯ ಜೊತೆಗೆ ದಂಡ ವಿಧಿಸಲಾಗುತ್ತದೆ. ಜಾಹಿರಾತುದಾರರು, ಪ್ರಕಟಣೆಗಾರರು, ಮುದ್ರಣಗಾರರು, ಭಾವಚಿತ್ರವಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
Advertisement
Advertisement
ಬುಧವಾರ ಹೈಕೋರ್ಟ್ ನಲ್ಲಿ ಏನಾಯ್ತು?
ಬುಧವಾರ ಬೆಳಗ್ಗೆ ಕಲಾಪಕ್ಕೂ ಮುನ್ನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರು ಬಿಬಿಎಂಪಿ ವಕೀಲರ ಮೂಲಕ ಆಯುಕ್ತರಿಗೆ ಮೌಖಿಕವಾಗಿ ಆದೇಶ ಹೊರಡಿಸಿದ್ದರು. ವಕೀಲರು ಫೋನ್ ನರೆ ಮೂಲಕ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರ ಗಮನಕ್ಕೆ ತಂದಿದ್ದರು.
ಹೈಕೋರ್ಟ್ ಆದೇಶದಿಂದ ಮಂಜುನಾಥ್ ಪ್ರಸಾದ್ ಎಲ್ಲ ಅಧಿಕಾರಿಗಳಿಗೆ ಫೋನ್ ಕರೆ ಮಾಡಿ, ಬ್ಯಾನರ್ ಹಾಗೂ ಫ್ಲೆಕ್ಸ್ ತುರ್ತು ತೆರವುಗೊಳಿಸಿ, ಅವುಗಳ ಫೋಟೋವನ್ನು ವ್ಯಾಟ್ಸಪ್ ಮೂಲಕ ತಮ್ಮ ಮೊಬೈಲಿಗೆ ಕಳುಹಿಸುವಂತೆ ಆದೇಶಿಸಿದ್ದರು. ಅಷ್ಟೇ ಅಲ್ಲದೆ ಮಧ್ಯಾಹ್ನ ಖುದ್ದು ಕೋರ್ಟ್‍ಗೆ ಹಾಜರಾಗಿದ್ದರು. ನಂತರದ ವಿಚಾರಣೆಯಲ್ಲಿ ತೆರವು ಕಾರ್ಯದ ವರದಿಯನ್ನು ಬಿಬಿಎಂಪಿ ಪರ ವಕೀಲ ಕೋರ್ಟ್ ಗೆ ಒಪ್ಪಿಸಿದರು.
ಬಿಬಿಎಂಪಿ ಎಲ್ಲ ಸಿಬ್ಬಂದಿ ಬುಧವಾರ ಒಂದು ದಿನದ ಎಲ್ಲಾ ಕೆಲಸಗಳನ್ನು ಪಕ್ಕಕ್ಕೆ ಸರಿಸಿ ಕೇವಲ ಬ್ಯಾನರ್ ಹಾಗೂ ಫ್ಲೆಕ್ಸ್ ತೆರವು ಕಾರ್ಯದಲ್ಲಿ ತೊಡಗಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ 5 ಸಾವಿರಕ್ಕೂ ಹೆಚ್ಚು ಅನಧಿಕೃತ ಬ್ಯಾನರ್ ಹಾಗೂ ಫ್ಲೆಕ್ಸ್ ತೆರವು ಮಾಡಿದ್ದರು. ಕೆಲವು ಪ್ರದೇಶಗಳಲ್ಲಿ ತಡರಾತ್ರಿಯವರೆಗೂ ತೆರವು ಕಾರ್ಯ ನಡೆದಿತ್ತು.
ತಡರಾತ್ರಿವರೆಗೆ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಅವರ ಜನ್ಮದಿನ ಶುಭಾಶಯದ ಕೋರಿ ಹಾಕಿದ್ದ ಬ್ಯಾನರ್ ಹಾಗೂ ಫ್ಲೆಕ್ಸ್‍ಗಳನ್ನು ಬಿಡಲಾಗಿತ್ತು.
ಎಲ್ಲ ವಿಭಾಗದ ಜಂಟಿ ಆಯುಕ್ತರು, ಮುಖ್ಯ ಎಂಜನಿಯರ್‍ಗಳು ಸೇರಿದಂತೆ ಸೂಪರಿಂಟೆಂಡಿಂಗ್, ಕಾರ್ಯಪಾಲಕ ಹಾಗೂ ಸಹಾಯಕ ಕಾರ್ಯಪಾಲಕ ಎಂಜನಿಯರ್‍ಗಳು, ಸಹಾಯಕ ಸಿಬ್ಬಂದಿ, ಗ್ಯಾಂಗ್‍ಮನ್‍ಗಳು ಮತ್ತು ಪೌರಕಾರ್ಮಿಕರು ತೆರವು ಕಾರ್ಯದಲ್ಲಿ ತೊಡಗಿದ್ದರು. ಈ ಕಾರ್ಯಾಚರಣೆಯಲ್ಲಿ ಒಟ್ಟು 2 ಸಾವಿರ ಸಿಬ್ಬಂದಿ ಹಾಗೂ 500 ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ.
ಮುಂದಿನ ನಡೆ:
ಫ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ನಾಶಮಾಡಬಾರದು ಎಂದು ಕೋರ್ಟ್ ಸೂಚಿಸಿದ್ದು, ತೆರವು ಗೊಳಿಸಿರುವ ಫೋಟೋಗಳನ್ನು ಗುರುವಾರ ನೀಡಬೇಕು ಆದೇಶ ನೀಡಿತ್ತು. ಆಗಸ್ಟ್ 8ರಂದು ಮತ್ತೆ ವಿಚಾರಣೆ ನಡೆಯಲಿದ್ದು, ಕಾರ್ಯಾಚರಣೆಯ ಸಂಪೂರ್ಣ ವರದಿ ನೀಡಲಾಗುವುದು ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.