ವಿಧಾನಸಭೆಯಲ್ಲಿ ಅಂಗೀಕಾರವಾದ ವಿಧೇಯಕಗಳು ಯಾವ್ಯಾವು?
ಬೆಂಗಳೂರು: ಯಾವುದೇ ಖಾಸಗಿ ರಸ್ತೆಯನ್ನು ಸಾರ್ವಜನಿಕ ರಸ್ತೆ ಅಂತ ಘೋಷಣೆ ಮಾಡಲು ಬಿಬಿಎಂಪಿಗೆ ಅಧಿಕಾರ ನೀಡುವ ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ’ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.
ಹೆಚ್.ಕೆ.ಪಾಟೀಲ್ ಅವರು ವಿಧೇಯಕ ಬಗ್ಗೆ ಮಾಹಿತಿ ನೀಡಿದರು. ನಗರದ ಖಾಸಗಿ ರಸ್ತೆ, ಬೀದಿಗಳು ಇನ್ಮುಂದೆ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ. ಬಿಬಿಎಂಪಿಯೇ ನಗರದ ಖಾಸಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಅವಕಾಶ ನೀಡಿದೆ. ಅನಧಿಕೃತ ಕಟ್ಟಡ ಅಥವಾ ಅದರ ಭಾಗ ಬಳಸುವುದರಿಂದ ಮಾಲೀಕ ಅಥವಾ ಇತರೆ ವ್ಯಕ್ತಿಗಳನ್ನು ತಡೆಯಲು ವಿಧೇಯಕದಲ್ಲಿ ಅವಕಾಶ ಇದೆ.
ಇ-ಸ್ವತ್ತು ತಂತ್ರಾಂಶದಲ್ಲಿ ಕೇವಲ 44 ಲಕ್ಷ ಆಸ್ತಿಗಳು ಮಾತ್ರ ನಮೂದಾಗಿದೆ. ಅಂದರೆ, ಸುಮಾರು 96 ಲಕ್ಷ ಆಸ್ತಿಗಳು ಇ-ಸ್ವತ್ತು ತಂತ್ರಾಂಶದಿಂದ ಹೊರಗಡೆ ಇವೆ. ಇದೀಗ ಈ ಆಸ್ತಿಗಳಿಗೂ ಇ-ಖಾತಾ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇಂತಹ ಅನಧಿಕೃತ ಸ್ವತ್ತುಗಳ ಮೇಲೆ ಶುಲ್ಕ/ದಂಡ ವಿಧಿಸಿ ವಸೂಲಿ ಮಾಡಿ ಹೆಚ್ಚುವರಿ ಸಂಪನ್ಮೂಲವನ್ನು ಕ್ರೋಢೀಕರಿಸಲು ಸರ್ಕಾರ ಮುಂದಾಗಿದೆ. ಭೂ ಪರಿವರ್ತನೆ ಆಗಿರದ ಅಥವಾ ಭೂಪರಿವರ್ತಿತವಾಗಿಯೂ ವಿನ್ಯಾಸ ನಕ್ಷೆ ಅನುಮೋದನೆ ಆಗಿರದ ರೆವಿನ್ಯೂ ಭೂಮಿಯಲ್ಲಿನ ನಿವೇಶನಗಳಿಗೆ ಇ-ಖಾತಾ ನೀಡಲು ತೀರ್ಮಾನಿಸಲಾಗಿದೆ.
ಕರ್ನಾಟಕ ಭೂಕಂದಾಯ ತಿದ್ದುಪಡಿ ವಿಧೇಯಕ
ಇದೇ ವೇಳೆ, ಕರ್ನಾಟಕ ಭೂಕಂದಾಯ ತಿದ್ದುಪಡಿ ವಿಧೇಯಕವನ್ನೂ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ನಗರ ಪ್ರದೇಶಗಳಲ್ಲಿ ಭೂನಿರ್ಬಂಧಿತ ಬಿ ಖರಾಬನ್ನು ಸುತ್ತ ಇರೋರಿಗೆ ಮಂಜೂರು ಮಾಡಲು ಅವಕಾಶ ಕೊಟ್ಟಿದ್ರು. ಇದರ ದುರುಪಯೋಗ ಆಗಿರೋದು ಪತ್ತೆಯಾಗಿದೆ. ಬಿ ಖರಾಬು ಭೂಮಿಯನ್ನು ಮಂಜೂರು ಮಾಡುವಲ್ಲಿ ಇರುವ ಲೋಪಗಳನ್ನು ಸರಿಪಡಿಸಲಾಗಿದೆ. 3800 ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಮಾಡಲಾಗಿದೆ. ಈ ಕಂದಾಯ ಗ್ರಾಮಗಳಿಗೆ ಹೆಸರು ಇಡಲು, ಮರು ನಾಮಕರಣ ಮಾಡಲು ಹೊಸ ಸೆಕ್ಷನ್ ಸೇರಿಸಲಾಗಿದೆ. ಕಂದಾಯ ಕಚೇರಿಗಳ ಹಳೆಯ ದಾಖಲೆಗಳನ್ನು ಸ್ಕ್ಯಾನಿಂಗ್ ಹಾಗೂ ಡಿಜಿಟಲೈಸ್ ಮಾಡಲು ವಿಧೇಯಕದಲ್ಲಿ ತಿದ್ದುಪಡಿ ತಂದು ಅವಕಾಶ ನೀಡಲಾಗಿದೆ. ಡಿಜಿಟಲೀಕರಣಕ್ಕೆ ತಹಸಿಲ್ದಾರರು, ಎಸಿ, ಡಿಸಿಗಳನ್ನು ಉಸ್ತುವಾರಿ ಅಧಿಕಾರಿಗಳಾಗಿ ನೇಮಿಸಲು ವಿಧೇಯಕದಲ್ಲಿ ಅವಕಾಶ ಇದೆ. ರೆವಿನ್ಯೂ ಅಧಿಕಾರಿಗಳ ಸೀಲ್ ಹಾಗೂ ಸ್ಟಾಂಪುಗಳ ದುರುಪಯೋಗ ತಡೆಯಲು ವಿಧೇಯಕದಲ್ಲಿ ಅವಕಾಶ ಇದೆ. ಸೀಲು, ಸ್ಟಾಂಪು ದುರುಪಯೋಗಕ್ಕೆ ಈ ಹಿಂದೆ ಶಿಕ್ಷೆ ಇರಲಿಲ್ಲ, ಈಗ ಶಿಕ್ಷಾರ್ಹ ಅಪರಾಧ ಎಂದು ವಿಧೇಯಕದಲ್ಲಿ ಸೇರಿಸಲಾಗಿದೆ.
ಕರ್ನಾಟಕ ನೋಂದಣಿ ತಿದ್ದುಪಡಿ ವಿಧೇಯಕ
ಜೊತೆಗೆ, ಕರ್ನಾಟಕ ನೋಂದಣಿ ತಿದ್ದುಪಡಿ ವಿಧೇಯಕಕ್ಕೂ ಅಂಗೀಕಾರ ನೀಡಲಾಯಿತು. ಈ ವಿಧೇಯಕ ಮೂಲಕ ನೋಂದಣಿ ಪ್ರಕ್ರಿಯೆಗಳಲ್ಲಿ ಇನ್ನಷ್ಟು ಸುಧಾರಣೆಯನ್ನು ಸರ್ಕಾರ ತಂದಿದೆ. ಪಂಚಾಯ್ತಿ/ಮುನಿಸಿಪಾಲಿಟಿಗಗಳಲ್ಲಿ ಇ ಖಾತಾ ದಾಖಲೀಕರಣಕ್ಕೆ ಅವಕಾಶ ನೀಡಲಾಗಿದೆ. ನೋಂದಣಿಗಳಲ್ಲಿ ಅಕ್ರಮ ತಡೆಗೂ ಇದರಿಂದ ಕ್ರಮ ವಹಿಸಬಹುದು. ಜಿಪಿಎ ಆಧಾರಿತ ಸೇಲ್ ಡೀಡ್ ಮಾಡಿಕೊಳ್ಳುವಾಗ ಜಿಪಿಎ ಸಹ ನೋಂದಣಿ ಆಗಿರಬೇಕು ಎಂಬ ಷರತ್ತು ಸೇರ್ಪಡೆ ಮಾಡಲಾಗಿದೆ. ಇನ್ಮುಂದೆ ಸೇಲ್ ಡೀಡ್‌ಗೂ ಮುನ್ನ ಜಿಪಿಎ ಅನ್ನು ನೋಂದಣಿ ಮಾಡಿಕೊಂಡಿರಬೇಕು. ಇನ್ಮುಂದೆ ಜಿಪಿಎ ಆಧರಿಸಿ ಮಾಡಿಕೊಳ್ಳುವ ಸೇಲ್ ಡೀಡ್ ಮಾಡಲು ನೋಂದಾಯಿತ ಜಿಪಿಎ ಕಡ್ಡಾಯಗೊಳಿಸಲಾಗಿದೆ. ಸರ್ಕಾರದಿಂದ ಕೊಡುವ ಜಮೀನು, ನಿವೇಶನಗಳನ್ನು ನೋಂದಣಿ ಮಾಡಿಯೇ ಮಂಜೂರು ಮಾಡಲು ವಿದೇಯಕದಲ್ಲಿ ಅವಕಾಶ ನೀಡಲಾಗಿದೆ. ಇದರಿಂದ ದಾಖಲೆ ಕಳೆದುಕೊಳ್ಳುವ ಆತಂಕ ಇರೋದಿಲ್ಲ. ಈ ವೇಳೆ ಜಿಪಿಎ ಆಧಾರಿತ ನೋಂದಣಿಯಲ್ಲೂ ಸಾಕಷ್ಟು ದುರುಪಯೋಗ ಆಗುತ್ತದೆ. ಹಳೆಯ ಜಿಪಿಎಗಳನ್ನೇ ಮತ್ತೆ ಸೃಷ್ಟಿ ಮಾಡ್ತಾರೆ. ಇದನ್ನು ತಡೆಯಲು ಕ್ರಮ ತಗೊಳ್ಳಿ ಅಂತ ಎಸ್.ಆರ್.ವಿಶ್ವನಾಥ್ ಸಲಹೆ ನೀಡಿದ್ದಾರೆ.
ಕರ್ನಾಟಕ ಭೂಕಬಳಿಕೆ ನಿಷೇಧ ತಿದ್ದುಪಡಿ ವಿಧೇಯಕ
ವಿಧಾನಸಭೆಯಲ್ಲಿ ಕರ್ನಾಟಕ ಭೂಕಬಳಿಕೆ ನಿಷೇಧ ತಿದ್ದುಪಡಿ ವಿಧೇಯಕಕ್ಕೂ ಅಂಗೀಕಾರ ನೀಡಲಾಯಿತು. ಕಂದಾಯ ಇಲಾಖೆಯ ಭೂ ಒತ್ತುವರಿ ತೆರವು ಪ್ರಕ್ರಿಯೆಗಳನ್ನು ಸುಲಭ ಮಾಡಲು ಕಾಯ್ದೆಗೆ ಮಹತ್ವದ ತಿದ್ದುಪಡಿ ಇದಾಗಿದೆ. ಭೂ ಒತ್ತುವರಿ ತೆರವು ಪ್ರಕ್ರಿಯೆ ಶುರು ಮಾಡಿದ ಮೇಲೆ ಬಾಧಿತರು ವಿಶೇಷ ಭೂಕಬಳಿಕೆ ಕೋರ್ಟ್ ಗಳಲ್ಲಿ ಪ್ರಶ್ನಿಸಲು ಅವಕಾಶ ನಿರಾಕರಿಸುವ ತಿದ್ದುಪಡಿಯನ್ನು ಸರ್ಕಾರ ತಂದಿದೆ. ಒತ್ತುವರಿ ತೆರವು ಪ್ರಕ್ರಿಯೆ ಮುಗಿದ ಮೇಲೆ ಬಾಧಿತರು ಕೋರ್ಟಿಗೆ ಹೋಗಬಹುದು ಅಥವಾ ಒತ್ತುವರಿ ತೆರವು ಪ್ರಕ್ರಿಯೆ ಆರಂಭಕ್ಕೂ ಮುನ್ನ ಕೋರ್ಟಿಗೆ ಹೋಗಬಹುದು. ಆದರೆ, ಒಮ್ಮೆ ತೆರವು ಕಾರ್ಯ ಶುರುವಾದ ನಂತರ ಕೋರ್ಟುಗಳಿಗೆ ಹೋಗದಂತೆ ತಡೆಯಲು ವಿಧೇಯಕದಲ್ಲಿ ಅವಕಾಶ ಇದೆ. ಇದರಿಂದ ಒತ್ತುವರಿ ತೆರವು ಕಾರ್ಯ ವರ್ಷಗಟ್ಟಲೆ ನನೆಗುದಿಗೆ ಬೀಳುವುದನ್ನು ತಡೆಯಬಹುದು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕ
ಈ ವಿಧೇಯಕಕ್ಕೂ ಅಂಗೀಕಾರ ಸಿಕ್ಕಿದೆ. ಮಂಡ್ಯದಲ್ಲಿ ಪ್ರತ್ಯೇಕ ಕೃಷಿ ವಿವಿ ಸ್ಥಾಪನೆಗೆ ವಿಧೇಯಕ ಅಂಗೀಕರಿಸಲಾಯಿತು. ಮಂಡ್ಯದ ವಿ.ಸಿ ಫಾರ್ಮ್ನಲ್ಲಿ ಪ್ರತ್ಯೇಕ ಕೃಷಿ ವಿವಿ ಸ್ಥಾಪನೆಗೆ ಈ ಮೂಲಕ ನಿರ್ಧಾರ ಮಾಡಲಾಗಿದೆ. ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಕೊಡಗು ಜಿಲ್ಲೆಗಳ ಬೆಳೆಗಳ ಉತ್ಪಾದನೆ ಕ್ಷೇತ್ರದಲ್ಲಿ ಅಧ್ಯಯನ, ಸಂಶೋಧನೆ ನಡೆಸಲು ಅವಕಾಶ ಸಿಗಲಿದೆ. ಜಿಕೆವಿಕೆ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿಗಳಿಂದ ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು, ಪ್ರಯೋಗಾಲಯಗಳು, ಹಾಸ್ಟೆಲ್‌ಗಳು, ಗ್ರಂಥಾಲಯಗಳನ್ನು ವರ್ಗಾವಣೆ ಮಾಡುವ ಬಗ್ಗೆಯೂ ವಿಧೇಯಕದಲ್ಲಿ ಉಲ್ಲೇಖ ಮಾಡಲಾಗಿದೆ. ಇದಕ್ಕೆ ಉತ್ತರ ಕರ್ನಾಟಕ ಮೂಲದ ಶಾಸಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಯಾವುದೇ ಶಿಕ್ಷಣ ಸಂಸ್ಥೆ, ಕಾಲೇಜುಗಳನ್ನು ವರ್ಗಾವಣೆ ಮಾಡದಂತೆ ಒತ್ತಾಯ ಕೇಳಿಬಂದಿದೆ.