ನವದೆಹಲಿ: ಬಿಬಿಎಂಪಿಗೆ (BBMP) ಶೀಘ್ರ ಚುನಾವಣೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ (Supreme Court) ನವೆಂಬರ್ 3ಕ್ಕೆ ಮುಂದೂಡಿದೆ. ನ್ಯಾ. ಸೂರ್ಯಕಾಂತ್ ನೇತೃತ್ವದ ದ್ವಿ ಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೊಹ್ಟಗಿ, ಸರ್ಕಾರ ನೆಪಗಳನ್ನೊಡ್ಡಿ ಚುನಾವಣೆಯನ್ನು ಮುಂದೂಡುತ್ತಿದೆ. ಉದ್ದೇಶಪೂರ್ವಕವಾಗಿ ಇದನ್ನು ಮಾಡಲಾಗುತ್ತಿದೆ. ಎಲ್ಲವನ್ನು ಬದಿಗಿರಿಸಿ ಶೀಘ್ರ ಚುನಾವಣೆ ನಡೆಸಲು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್; ಸಚಿವ ಶಿವಾನಂದ ಪಾಟೀಲ್‌ಗೆ ಸುಪ್ರೀಂ ಚಾಟಿ
ಸರ್ಕಾರ ಪರ ವಾದ ಮಂಡಿಸಿದ ವಕೀಲರು, ನವೆಂಬರ್ ವೇಳೆಗೆ ಪುನರ್ ವಿಂಗಡನೆ, ಮೀಸಲಾತಿ ಪ್ರಕ್ರಿಯೆ ಮುಗಿಸಲಾಗುವುದು. ಇದಕ್ಕೆ ಸಮಯ ಬೇಕು ಈ ಬಗ್ಗೆ ಈಗಾಗಲೇ ಅಫಿಡವಿಟ್ ಸಲ್ಲಿಸಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೀಠ, ನವೆಂಬರ್ 1ರ ವೇಳೆ ಸರ್ಕಾರ ಏನು ಮಾಡಲಿದೆ ಎಂದು ವಿಸ್ತೃತ ಮಾಹಿತಿಯನ್ನು ನೀಡಿ ಎಂದು ಸೂಚಿಸಿ ವಿಚಾರಣೆ ಮುಂದೂಡಿತು.