– 5 ವರ್ಷಗಳವರೆಗೆ ದೇಶದ ಯಾವುದೇ ಹುಲಿ ಸಂರಕ್ಷಿತ ಅರಣ್ಯದಲ್ಲಿ ಶೂಟಿಂಗ್ ನಡೆಸುವಂತಿಲ್ಲ
ನವದೆಹಲಿ: ಮುಂದಿನ 5 ವರ್ಷಗಳವರೆಗೆ ದೇಶದ ಯಾವುದೇ ಹುಲಿ ಸಂರಕ್ಷಿತ ಅರಣ್ಯದಲ್ಲಿ ಚಿತ್ರೀಕರಣ ಮಾಡದಂತೆ ಜಾಗತಿಕ ಸುದ್ದಿ ಸಂಸ್ಥೆ ಬಿಬಿಸಿ ಹಾಗೂ ಪತ್ರಕರ್ತ ಜಸ್ಟಿನ್ ರೋಲಟ್ ಮೇಲೆ ಭಾರತ ಸರ್ಕಾರ ನಿಷೇಧ ಹೇರಿದೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್‍ಟಿಸಿಎ) ಸೋಮವಾರದಂದು ಈ ಆದೇಶ ನೀಡಿದ್ದು, ದೇಶದಲ್ಲಿರುವ 50 ಹುಲಿ ಸಂರಕ್ಷಿತಾರಣ್ಯದಲ್ಲಿ ಮುಂದಿನ 5 ವರ್ಷಗಳ ಕಾಲ ಬಿಬಿಸಿ ಚಿತ್ರೀಕರಣ ಮಾಡುವಂತಿಲ್ಲ ಎಂದು ಹೇಳಿದೆ. ಪರಿಸರ ಮತ್ತು ಅರಣ್ಯ ಸಚಿವಾಲಯವೂ ಕೂಡ ರಾಷ್ಟ್ರೀಯ ಉದ್ಯಾನವನ ಹಾಗೂ ಅಭಯಾರಣ್ಯಗಳಿಂದ ಬಿಬಿಸಿಗೆ ನಿಷೇಧ ಹೇರಲು ಚಿಂತಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಅಧಿಕಾರಿಗಳು ಈ ಬಗ್ಗೆ ಇನ್ನೂ ಸ್ಪಷ್ಟಪಡಿಸಿಲ್ಲ ಎಂದು ವರದಿಯಾಗಿದೆ.
Advertisement
ನಿಷೇಧಕ್ಕೆ ಕಾರಣವೇನು: ಬಿಬಿಸಿ ತಯಾರಿಸಿದ್ದ ಒಂದು ಸಾಕ್ಷ್ಯಚಿತ್ರದಲ್ಲಿ ಕಾಝೀರಂಗಾ ಹುಲಿ ಸಂರಕ್ಷಿತ ಅರಣ್ಯವನ್ನು ಆಕ್ಷೇಪಾರ್ಹ ರೀತಿಯಲ್ಲಿ ತೋರಿಸಲಾಗಿತ್ತು. ಕಾಝೀರಂಗಾ: ದಿ ಪಾರ್ಕ್ ದಟ್ ಶೂಟ್ಸ್ ಪೀಪಲ್ ಟು ಪ್ರೊಟೆಕ್ಟ್ ರಿನೋಸ್ (ಘೇಂಡಾಮೃಗಗಳನ್ನು ಉಳಿಸಲು ಮನುಷ್ಯರನ್ನು ಶೂಟ್ ಮಾಡೋ ಕಾಝೀರಂಗಾ ಸಂರಕ್ಷಿತಾರಣ್ಯ) ಎಂದು ಬಿಬಿಸಿ ಹೇಳಿತ್ತು. ಸಂರಕ್ಷಿತಾರಣ್ಯದ ಈ ನೀತಿಯಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.
Advertisement
ಕೋಡ್ ಆಫ್ ಕ್ರಿಮಿನಲ್ ಪ್ರೊಸಿಜರ್‍ನ 197ನೇ ಸೆಕ್ಷನ್ ಅಡಿಯಲ್ಲಿ ಶಸ್ತ್ರಾಸ್ತ್ರ ಹೊಂದಿದ ಬೇಟೆಗಾರರನ್ನು ಹತ್ತಿಕ್ಕಲು ಕಾಝೀರಂಗಾ ಅರಣ್ಯದ ಗಾರ್ಡ್‍ಗಳಿಗೆ ಅಸ್ಸಾಂ ಸರ್ಕಾರ ನೀಡಿರುವ ವಿನಾಯಿತಿಯನ್ನು ಸಾಕ್ಷ್ಯ ಚಿತ್ರದಲ್ಲಿ ಕೊಲೆ ಮಾಡಲು ಗುಂಡು ಹಾರಿಸುತ್ತಾರೆ ಎಂಬಂತೆ ತೋರಿಸಲಾಗಿದೆ ಎಂದು ಆರೋಪಿಸಿ ಎನ್‍ಟಿಸಿಎ ಬಿಬಿಸಿಗೆ ನೋಟಿಸ್ ನೀಡಿತ್ತು. ಇದಕ್ಕೆ ಉತ್ತರಿಸಿದ್ದ ಪತ್ರಕರ್ತ ರೋಲಟ್, ನಾವು ಚಿತ್ರೀಕರಣ ಮಾಡುವ ವೇಳೆ ಯಾರಿಗೂ ಮೋಸ ಮಾಡುವ ಪ್ರಯತ್ನ ಮಾಡಿಲ್ಲ. ಸಂರಕ್ಷಿತಾರಣ್ಯದ ಪ್ರಾಣಿ ರಕ್ಷಣಾ ತಂತ್ರವನ್ನು ಕೊಲ್ಲವುದಕ್ಕೆ ಶೂಟ್ ಮಾಡುವುದು ಎಂಬ ಅರ್ಥದಲ್ಲಿ ತೋರಿಸಿಲ್ಲ. ಆದರೆ ನಾವು ಚಿತ್ರೀಕರಣ ಮಾಡುವ ವೇಳೆ ಅನುಮಾನಾಸ್ಪದ ಬೇಟೆಗಾರರನ್ನು ಕೊಲ್ಲುವಂತಹ ಸಂಗತಿ ತಿಳಿಯಿತು ಎಂದು ಹೇಳಿದ್ದಾರೆ. ನೋಟಿಸ್‍ಗೆ ಬಿಬಿಸಿ ಸಮಾಧಾನಕರವಾದ ಉತ್ತರ ನೀಡದ ಹಿನ್ನೆಲೆಯಲ್ಲಿ ಎನ್‍ಟಿಸಿಎ ನಿಷೇಧ ಹೇರಿದೆ.
Advertisement
ಬಿಬಿಸಿಯ ಸಾಕ್ಷ್ಯಚಿತ್ರವನ್ನು ನೋಡಿದ ನಂತರ ಅಸ್ಸಾಂ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೆವು. ಮುಂದೆ ದೇಶದ ಹುಲಿ ಸಂರಕ್ಷಿತಾರಣ್ಯದಲ್ಲಿ ಬಿಬಿಸಿ ಚಿತ್ರೀಕರಣ ಮಾಡದಂತೆ ನಿಷೇಧ ಹೇರಬೇಕೆಂದು ಶಿಫಾರಸ್ಸು ಮಾಡಿದ್ದೆವು. ಚಿತ್ರೀಕರಣ ಮಾಡಲು ಅನುಮತಿ ಪಡೆಯುವ ವೇಳೆ ಅವರು ಯಾವ ವಿಷಯದ ಮೇಲೆ ಚಿತ್ರೀಕರಣ ಮಾಡುತ್ತೇವೆ ಎಂದು ಹೇಳಿದ್ದರೋ ಅದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಬಿಬಿಸಿಯ ಅಂತಿಮ ಸಾಕ್ಷ್ಯ ಚಿತ್ರ ಸಂಪೂರ್ಣ ಭಿನ್ನವಾಗಿತ್ತು ಎಂದು ಕಾಝೀರಂಗಾ ಸಂರಕ್ಷಿತಾರಣ್ಯದ ಅಧಿಕಾರಿ ಸಂತ್ಯೇಂದ್ರ ಸಿಂಗ್ ಹೇಳಿದ್ದಾರೆ. ಬಿಬಿಸಿ ಯವರು ಅನುಮತಿ ಪಡೆಯುವ ವೇಳೆ ಪ್ರಾಣಿ ಸಂರಕ್ಷಣೆಯಲ್ಲಿ ಭಾರತದ ಪರಿಣಿತಿ ಮತ್ತು ಎದುರಿಸುತ್ತಿರುವ ಸವಾಲಗಳು ಎಂಬ ವಿಷಯದ ಬಗ್ಗೆ ಸಾಕ್ಷ್ಯಚಿತ್ರ ಮಾಡಲಿರುವುದಾಗಿ ಹೇಳಲಾಗಿತ್ತು ಎಂದು ವರದಿಯಾಗಿದೆ.
Advertisement
ಅಸ್ಸಾಂನ ಕಾಝೀರಂಗಾ ಹುಲಿ ಸಂರಕ್ಷಿತಾರಣ್ಯ 800 ಚದರ ಅಡಿಗಳಷ್ಟು ವಿಸ್ತೀರ್ಣವಿದ್ದು. ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಒಂದು ಕೊಂಬಿನ ಘೇಂಡಾ ಮೃಗಗಳಿರುವ ಪ್ರದೇಶವಾಗಿದೆ. ಎನ್‍ಟಿಸಿಎ ನ ಇತ್ತೀಚಿನ ಸಮೀಕ್ಷೆಯ ಪ್ರಕಾರ ಇಲ್ಲಿ 103 ಹುಲಿಗಳಿವೆ.