– ಬಸವಣ್ಣನನ್ನು ರಾಜಕೀಯ ವಸ್ತುವಾಗಿ ಬಳಕೆ ಮಾಡ್ತಿರೋದು ದುಃಖದ ಸಂಗತಿ
ಬೆಂಗಳೂರು: ಇವತ್ತಿನ ಕನ್ನಡಕ್ಕೆ ಕನ್ನಡಿಗರಿಂದ ಹಾಗೂ ಹೊರಗಿನವರಿಂದಲೂ ಸವಾಲಿದೆ. ಕನ್ನಡವನ್ನು ದಕ್ಷಿಣದ ಇತರ ಭಾಷೆಗಳು ಒಪ್ಪಿಕೊಳ್ಳುವುದಿಲ್ಲ. ನಮ್ಮ ನೆರೆ ಹೊರೆಯವರೇ ನಮ್ಮನ್ನು ವೈಷ್ಯಮ್ಯದಿಂದ ನೋಡ್ತಾರೆ. ಇದೆಲ್ಲವನ್ನ ಸರಿಪಡಿಸಿಕೊಂಡು ಕನ್ನಡವನ್ನು ಮೇಲೆತ್ತುವ ಕೆಲಸ ಆಗ್ಬೇಕಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶುಕ್ರವಾರ ಡಾ.ಸಿ.ಸೋಮಶೇಖರ್, ಎನ್.ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನ ವತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ಜೀವಮಾನ ಸಾಧನೆಗಾಗಿ ಹಿರಿಯ ಸಾಧಕರಿಗೆ ಸಂಸ್ಕೃತಿ ಸಂಗಮ 2025 ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸೋಮಶೇಖರ್ ಅವರ ಕಾರ್ಯಕ್ರಮದಲ್ಲಿ ಮಾತು ಕೇಳಬೇಕು. ಮಾತನಾಡುವುದು ಎಐ ಮೂಲಕವೂ ನಡೆಯುತ್ತದೆ. ಮಾತಿಗೆ ಬೆಲೆ ಬರಬೇಕು. ಮಾತಿನಂತೆ ನಡೆಯುವ ಶಕ್ತಿಯನ್ನು ಪಡೆಯಬೇಕು. ಎಲ್ಲ ಅವಕಾಶ ಭಗವಂತ ನಮಗೆ ಕೊಟ್ಟಿದ್ದಾನೆ. ನಾವು ಮಾತಿನಂತೆ ನಡೆದಿದ್ದೇವೊ ಇಲ್ಲವೋ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದಿದ್ದಾರೆ. ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ನ.21 ಕ್ಕೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುತ್ತಾರಂತೆ: ಪ್ರಶ್ನೆಗೆ ಸಿದ್ದರಾಮಯ್ಯ ಗರಂ
ನಾವು ನಿರಂತರವಾಗಿ ನಮ್ಮೊಡನೆ ಮಾತನಾಡುತ್ತಿರುತ್ತೇವೆ. ನಮ್ಮ ಆತ್ಮೀಯ ಸ್ನೇಹಿತ ಅಂದರೆ ನಮಗೆ ನಾವೇ. ಇನ್ನೊಬ್ಬನಿಗೆ ಸುಳ್ಳು ಹೇಳಬೇಕೆಂದರೆ ಮೊದಲು ನಮ್ಮೊಳಗೆಯೇ ಹೇಳುತ್ತೇವೆ. ನಮ್ಮ ನೆರಳಿಗೆ ಹೆದರಿ ನಡೆಯುವುದು ನಮ್ಮ ಸಂಸ್ಕೃತಿ. ಸಂಸ್ಕೃತಿಯ ಬಗ್ಗೆ ಬಹಳ ಚರ್ಚೆಯಾಗಿದೆ. ಅವೆಲ್ಲವೂ ಮಾನವೀಯ ಸಂಸ್ಕೃತಿಯಿAದ ಹೊರ ಬಂದಿವೆ ಎಂದು ವಿವರಿಸಿದ್ದಾರೆ.
ಇತ್ತೀಚಿನವರಿಗೆ ಸಂಸ್ಕೃತಿ ಮತ್ತು ನಾಗರಿಕತೆಯ ಬಗ್ಗೆ ವ್ಯತ್ಯಾಸ ಗೊತ್ತಿಲ್ಲ. ಒಬ್ಬ ಶ್ರೀಮಂತನನ್ನು ದೊಡ್ಡ ಸುಸಂಸ್ಕೃತ ಅಂತ ಹೊಗಳುತ್ತೇವೆ. ಆತನನ್ನು ಹತ್ತಿರದಿಂದ ನೋಡಿದಾಗ ಗೊತ್ತಾಗುತ್ತದೆ. ನಾಗರಿಕತೆ ಅಂದರೆ ಸೈಕಲ್ ಇತ್ತು. ನಂತರ ಬೈಕ್, ಬಸ್ ಬಂತು. ಈಗ ವಿಮಾನ ಬಂದಿದೆ. ಹಾಗೆಯೇ ನಗರಗಳು ಬೆಳೆದಿವೆ. ನಮ್ಮ ಬಳಿ ಏನಿದೆ, ಅದು ನಾಗರಿಕತೆ. ನಾವು ಏನಾಗಿದ್ದೇವೆ ಅದು ಸಂಸ್ಕೃತಿ. ನಮ್ಮ ಬಳಿ ಏನೇ ಶ್ರೀಮಂತಿಕೆ ಬಂದರೂ ಎಷ್ಟು ಉಸಿರಾಡುತ್ತೇವೊ ಅಷ್ಟೇ ಉಸಿರಾಡುತ್ತೇವೆ. ಗಾಳಿ, ಬೆಳಕು ಎಲ್ಲರಿಗೂ ಸಮಾನವಾಗಿದೆ ಎಂದು ಹೇಳಿದ್ದಾರೆ.
ಸುಸಂಸ್ಕೃತರಿಗೆ ಪ್ರಶಸ್ತಿ
ನಮ್ಮ ಕನ್ನಡದಲ್ಲಿ ಸಂಸ್ಕೃತಿಯನ್ನು ಯಾವ ರೀತಿ ಅರ್ಥೈಸಿದ್ದೇವೆ ಅದು ನಮ್ಮ ಸಂಸ್ಕೃತಿ. ನಮ್ಮ ಸೋಮಶೇಖರ್ ಅವರು ಜ್ಞಾನದ ಸಂಸ್ಕೃತಿ ಹೊಂದಿರುವವರಿಗೆ ಪ್ರಶಸ್ತಿ ನೀಡುತ್ತ ಬಂದಿದ್ದಾರೆ. ಅವರು ಹಲವಾರು ಪುಸ್ತಕ ಬರೆದಿದ್ದಾರೆ. ಅಧಿಕಾರಿಯಾಗಿ ಕನ್ನಡಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅನೇಕ ಅಧಿಕಾರಿಗಳಲ್ಲಿ ಸಾಕಷ್ಟು ಪ್ರತಿಭೆ ಇದೆ. ಅದನ್ನು ಅಧಿಕಾರ ಓವರ್ ಟೇಕ್ ಮಾಡಿದಾಗ ಪ್ರತಿಭೆ ಗೌಣವಾಗುತ್ತದೆ. ಸೋಮಶೇಖರ್ ಅವರಲ್ಲಿ ಪ್ರತಿಭೆ ಕಡಿಮೆಯಾಗಿಲ್ಲ ಎಂದಿದ್ದಾರೆ.
ಅವರು ಸಾಹಿತ್ಯ ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ ಎನ್ನುವುದು ಸಂತೋಷದ ಸುದ್ದಿ. ಸಾಹಿತ್ಯ ಅಂದರೆ ರಾಜಕೀಯ. ಮನುಷ್ಯ ರಾಜಕೀಯ ಜೀವಿ. ಪ್ರತಿಯೊಬ್ಬರ ಮನೆಯಲ್ಲಿಯೂ ರಾಜಕೀಯ ಇದೆ. ಇವತ್ತಿನ ಕನ್ನಡಕ್ಕೆ ಕನ್ನಡಿಗರಿಂದ ಹಾಗೂ ಹೊರಗಡೆಯಿಂದ ಸವಾಲಿದೆ. ಕನ್ನಡವನ್ನು ದಕ್ಷಿಣದ ಇತರ ಭಾಷೆಗಳು ಒಪ್ಪಿಕೊಳ್ಳುವುದಿಲ್ಲ. ನಮ್ಮ ನೆರೆ ಹೊರೆಯವರೆ ನಮ್ಮನ್ನು ವೈಷ್ಯಮ್ಯದಿಂದ ನೋಡ್ತಾರೆ. ಅವರೆಲ್ಲರನ್ನು ಸರಿಪಡಿಸಿಕೊಂಡು ಮೇಲೆತ್ತುವ ಕೆಲಸ ಆಗಬೇಕಿದೆ. ಕನ್ನಡಕ್ಕೆ ಯಾವುದೆ ಕುತ್ತಿಲ್ಲ. ಕನ್ನಡ ಯಾವತ್ತೂ ನಶಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಜಂಟಿ ಕಾರ್ಯ ಅಗತ್ಯ
ಜಾನಪದ ಲೋಕದ ಹೆಚ್.ಎಲ್.ನಾಗೇಗೌಡರು ನಮಗೆ ಪರಿಚಿತರು. ಅವರ ಪ್ರೇರಣೆಯಿಂದ ಶಿಗ್ಗಾವಿಯಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದ್ದೇವೆ. ಜಾನಪದ ಲೋಕ ಮತ್ತು ಜಾನಪದ ವಿಶ್ವವಿದ್ಯಾಲಯ ಜಂಟಿಯಾಗಿ ಕಾರ್ಯ ನಿರ್ವಹಿಸಿದರೆ ಇನ್ನಷ್ಟು ಅನುಕೂಲವಾಗಲಿದೆ. ಕಪ್ಪಣ್ಣ, ಕಾ.ತ ಚಿಕ್ಕಣ್ಣ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಕಸ್ತೂರಿ ಶಂಕರ ಅವರು ನಮ್ಮ ಮನದಾಳದಲ್ಲಿದ್ದಾರೆ. ಅವರ ಹಾಡುಗಳು ಪ್ರತಿ ದಿನ ಕೇಳುತ್ತೇವೆ ಎಂದಿದ್ದಾರೆ.
ಒಂದು ದೇಶ ಎನ್ನುವ ಕಲ್ಪನೆ
ನಾವೆಲ್ಲ ಹಲವಾರು ರಂಗದಲ್ಲಿ ಕೆಲಸ ಮಾಡಿದ್ದೇವೆ. ದೇಶ ಮತ್ತು ನಾಡು ಕಟ್ಟಲು ನಾವು ಏನು ಮಾಡಿದ್ದೇವೆ ಎಂದು ಚಿಂತನೆ ಮಾಡಬೇಕು. ಸ್ವಾತಂತ್ರ‍್ಯ ಬಂದಾಗಿನ ದೇಶದ ಕಲ್ಪನೆಗೂ ಇಂದಿನ ಕಲ್ಪನೆಗೂ ವ್ಯತ್ಯಾಸ ಇದೆ. ದೇಶ ಉಳಿದರೆ ಸಂಸ್ಕೃತಿ ಉಳಿಯುತ್ತದೆ. ಕಲ್ಯಾಣ ರಾಜ್ಯವನ್ನು ವಚನಗಳ ಮೂಲಕ ನೆನಪಿಸಿಕೊಳ್ಳುತ್ತೇವೆ. ವಚನ ಸಾಹಿತ್ಯ, ದಾಸ ಸಾಹಿತ್ಯ ಕನ್ನಡದ ದೊಡ್ಡ ಸಾಹಿತ್ಯ. ಬಸವಣ್ಣನನ್ನು ಎಲ್ಲರೂ ಹಂಚಿಕೊMಡಿದ್ದಾರೆ. ಬಸವಣ್ಣ ಅವರು ಎಲ್ಲರಿಗೂ ಬೇಕಾದವರು. ಅವರನ್ನು ರಾಜಕೀಯ ವಸ್ತುವಾಗಿ ಬಳಕೆ ಮಾಡುತ್ತಿರುವುದು ದುಃಖದ ಸಂಗತಿ. ದೇಶ ಅನ್ನುವ ಕಲ್ಪನೆ ಒಂದು ಎಂದು ಒಪ್ಪಿಕೊಳ್ಳದಿದ್ದರೆ ದುರ್ದೈವದ ಸಂಗತಿ. ಈಗ ಗಟ್ಟಿಯಾಗಿ ನಿಂತರೆ ಮುಂದಿನ ಒಂದು ಶತಮಾನ ನಮ್ಮನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
 
					

 
		 
		 
		 
		 
		 
		 
		 
		 
		