ಹಾಸನ: ಜನರು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಕಳೆದುಕೊಳ್ಳುವ ಮುಂಚೆ, ಜನರಿಗೆ ಕುಡಿಯುವ ನೀರು, ಭೂಮಿಗೆ ನೀರು, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸೂರು. ಒಳ್ಳೆಯ ಗಾಳಿ, ದುಡಿಮೆಗೆ ಒಳ್ಳೆಯ ಬೆಲೆ. ಬದುಕಿನಲ್ಲಿ ಸಾಧನೆ ಮಾಡಲು ಅವಕಾಶ ಮಾಡಿಕೊಳ್ಳದಿದ್ದರೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
ಅವರು ಭಾನುವಾರ ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣದ ಸಂತೆಶಿವರ ಗ್ರಾಮದಲ್ಲಿ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರಿಗೆ ಹುಟ್ಟೂರಿನಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬದುಕಿನ ಸಾಕ್ಷಾತ್ಕಾರಕ್ಕೆ ಎರಡು ವಿಷಯ ಬಹಳ ಮುಖ್ಯ, ಒಂದು ಜ್ಞಾನ ಇನ್ನೊಂದು ಧ್ಯಾನ. ಇವೆರಡರ ಸಾಧನೆಯನ್ನು ನಮ್ಮೆಲ್ಲರ ಅಭಿಮಾನದ ಹಲವಾರು ಪ್ರಶಸ್ತಿಗೆ ಪಾತರಾಗಿರುವ ಎಸ್.ಎಲ್. ಭೈರಪ್ಪ (S. L. Bhyrappa) ಒಲಿಸಿಕೊಂಡಿದ್ದಾರೆ. ಬದುಕಿನಲ್ಲಿ ನಮ್ಮ ಮುಗ್ಧತೆ ಕಾಪಾಡಿಕೊಂಡು ಹೋಗುವುದು ಬಹಳ ಕಷ್ಟ. ಮಕ್ಕಳಿದ್ದಾಗ ನಮ್ಮ ಮುಖ ಮುಗ್ಧತೆಯಿಂದ ಕೂಡಿರುತ್ತದೆ. ಯಾಕೆಂದರೆ ಹೃದಯ ಮುಗ್ಧತೆಯಿಂದ ಕೂಡಿರುತ್ತದೆ. ದೊಡ್ಡವರಾದ ಮೇಲೆ ಆಕಾರ ವಿಕಾರ ಆಗಿರುತ್ತದೆ. ಭೈರಪ್ಪರ ಮುಗ್ಧತೆ ಈಗಲೂ ಇದೆ. ಅವರಲ್ಲಿ ಮಗುವಿನ ಮುಗ್ಧತೆ ಇದೆ. ಆತ್ಮಸಾಕ್ಷಿಯಾಗಿ ನಡೆದುಕೊಳ್ಳುವುದು ಬಹಳ ದೊಡ್ಡ ಸವಾಲು. ರಾಜಕಾರಣಿಗಳಿಗೆ ಆತ್ಮಸಾಕ್ಷಿ ಇರುವುದಿಲ್ಲ, ಬೈರಪ್ಪನವರು ಬದುಕನ್ನು ಅನುಭವಿಸಿ ಬರಹ ಬರೆದಿದ್ದಾರೆ. ಬರಹದಿಂದ ಬದುಕನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ನಾಡು ಬಹಳ ಶ್ರೀಮಂತ ಅಂತ ನಾವು ಕರೆಯುತ್ತೇವೆ. ಆರ್ಥಿಕವಾಗಿ ಶ್ರೀಮಂತರಿದ್ದರೆ ಅವರು ಶ್ರೀಮಂತರಲ್ಲ. ಶ್ರೀಮಂತಿಕೆ ವ್ಯಕ್ತಿಯ ಆರ್ಥಿಕ ಶ್ರೀಮಂತಿಕೆಯಿಂದ ಬರುವುದಿಲ್ಲ. ನಮ್ಮ ಸಂಸ್ಕೃತಿ, ಪರಂಪರೆ, ಕನ್ನಡ ನಾಡಿನ ಸಾತ್ವಿಕತೆ, ಕನ್ನಡ ನಾಡಿನಂತಹ ಹೃದಯವಂತ ಜನರು ಜಗತ್ತಿನ ಎಲ್ಲಿಯೂ ಸಿಗುವುದಿಲ್ಲ. ಕನ್ನಡ ನಾಡು ಶ್ರಿಮಂತ ಆಗಿರುವುದು ನಮ್ಮನ್ನಾಳಿದ ಮೈಸೂರು ಮಹಾರಾಜರು, ಹೊಯ್ಸಳರು, ಕದಂಬರು ಈ ನಾಡನ್ನು ಶ್ರೀಮಂತಗೊಳಿಸಿದ್ದಾರೆ. ಅದನ್ನು ಉಳಿಸಿದವರು ಸಾಹಿತಿಗಳು, ಕಲಾವಿದರು, ಶಿಲ್ಪಿಗಳು ಇದನ್ನು ಶ್ರೀಮಂತವಾಗಿಟ್ಟಿದ್ದಾರೆ. ಫಲವತ್ತಾದ ಮಣ್ಣು, ಅಮೃತದಂತಹ ನೀರು, ಶುದ್ಧವಾದ ಗಾಳಿ, ನಮ್ಮ ಜೀವಂತಿಕೆಯ ಆಧಾರ ಶ್ರೀಮಂತವಾಗಿದೆ. ಅದಕ್ಕೆ ಕನ್ನಡ ನಾಡು ಶ್ರೀಮಂತವಾಗಿದೆ. ಅಂತಹ ಶ್ರೀಮಂತಿಕೆ ಪುತ್ರ ನಮ್ಮೂರಿನಲ್ಲಿ ಹುಟ್ಟಿದ್ದಾರೆ ಎಂದರೆ ಎಲ್ಲರೂ ಪುಣ್ಯವಂತರು ಎಂದು ಹೇಳಿದ್ದಾರೆ.
ಕಾರ್ಯಕ್ರಮ ಪೇರಣೆಯಾಗಲಿ: ಎಲ್.ಎಲ್.ಭೈರಪ್ಪನವರ ಪರ್ವ ಕಾದಂಬರಿಯನ್ನು ಕಾಲೇಜಿನಲ್ಲಿದ್ದಾಗ ಓದಿದ್ದೆ. ಪರ್ವದಲ್ಲಿ ಸರ್ವಕಾಲಿಕ ಸತ್ಯವನ್ನು ಹೇಳಿದ್ದಾರೆ. ಅವರು ನಮ್ಮೂರಿನ ಕೆರೆ ತುಂಬಿಸುವ ಕೆಲಸ ಮಾಡಿ ಅಂತ ಹೇಳಿದಾಗ ನನ್ನ ಮನಸ್ಸಿಗೆ ನೋವಾಯಿತು. ವಿಶ್ವೇಶ್ವರ ಭಟ್ಟರು ಭೈರಪ್ಪನವರನ್ನು ಕರೆದುಕೊಂಡು ಬಂದಾಗ ಅವರು ನಮ್ಮೂರಿನ ಕೆರೆ ತಂಬಿಸಿ ಎಂದು ಕೇಳಿದಾಗ ನಾನು ಮಾಡಲೇಬೇಕು ಎಂದು ಮನಪೂರ್ವಕವಾಗಿ ಕೆಲಸ ಮಾಡಿದೆ. ಅತ್ಯಂತ ಸಂವೇದನಾ ಶೀಲ ಸಾಹಿತಿಗಳು ಏನು ಬೇಕಾದರೂ ಕೇಳಬಹುದಿತ್ತು. ಅವರು ಬಿಡಿಎ ಸೈಟ್ ಕೇಳಬಹುದಿತ್ತು. ಆದರೆ, ಅವರು ನನ್ನೂರಿಗೆ ನೀರು ಕೊಡಿ ಸ್ವಾಮಿ ಎಂದು ಕೇಳಿದರು. ಭೈರಪ್ಪನವರು ತಮ್ಮ ಬೇರನ್ನು ಎಂದೂ ಮರೆತಿಲ್ಲ. ತಮ್ಮ ಊರಿನ ಜನರು, ತಂದೆ ತಾಯಿಯನ್ನು ಮರೆತಿಲ್ಲ ಊರಿನ ಕೆರೆ ಮರೆತಿಲ್ಲ, ಎನ್ನುವುದಕ್ಕೆ ಇದೇ ಸಾಕ್ಷಿ. ಕನ್ನಡ ನಾಡಿನ ಪ್ರತಿಯೊಂದು ಗ್ರಾಮದಲ್ಲಿ ಎಸ್.ಎಲ್. ಭೈರಪ್ಪನಂಥವರು ಹುಟ್ಟಿದರೆ, ಈ ನಾಡು ಎಷ್ಟು ಆಗರ್ಭ ಶ್ರೀಮಂತ ಆಗುತ್ತಿತ್ತು. ಇವತ್ತಿನ ಕಾರ್ಯಕ್ರಮ ಅದಕ್ಕೆ ಪೇರಣೆ ಕೊಡಬೇಕು ಎಂದಿದ್ದಾರೆ.
ಹಾಸನ ಜಿಲ್ಲೆ ಬಹಳ ಶ್ರೀಮಂತವಾಗಿರುವ ಜಿಲ್ಲೆ ಇಲ್ಲಿಯ ಮಣ್ಣು ಕೆರೆ ಕಟ್ಟೆಗಳು, ಇಲ್ಲಿಯ ಭೂತಾಯಿಗೆ ರೈತನ ಬೆವರಿನ ಜೊತೆಗೆ ಗಂಗಾ ಮಾತೆಯ ಹನಿ ಬಿದ್ದರೆ ಭೂತಾಯಿ ಬಂಗಾರದ ಬೆಳೆ ಬೆಳೆಯುತ್ತಾಳೆ. ಹಿರಿಸಾವೆ ಯೋಜನೆ ಪೂರ್ಣಗೊಳ್ಳುತ್ತಿರುವುದು ಸಂತೋಷದ ವಿಚಾರ. ಯೋಜನೆಯನ್ನು ಯಾರೇ ಮಾಡಿರಲಿ ಬಹುದಿನಗಳ ಕನಸು ನನಸಾಗುತ್ತಿರುವುದು ಮುಖ್ಯ ಎಂದು ಹೇಳಿದ್ದಾರೆ.
ನಾವು ಮೈಸೂರು ಮಹಾರಾಜರನ್ನು ನೆನೆಸುತ್ತೇವೆ. ಯಡಿಯೂರಪ್ಪ ಅವರು ಒಂದು ಮಾತು ಹೇಳುತ್ತಿದ್ದರು, ಮೈಸೂರು ಮಹಾರಾಜರಿಗೆ ಎಷ್ಟು ದೊಡ್ಡ ಮನಸ್ಸು ಇದೆ ಎಂದರೆ ಎಷ್ಟೇ ಸಾಮಾನ್ಯ ಮನುಷ್ಯರು ಬಂದರೂ ಅಷ್ಟೇ ಪ್ರೀತಿಯಿಂದ ಮಾತನಾಡುತ್ತಾರೆ. ಅವರು ಇವತ್ತಿನ ಪ್ರಜಾಪಭುತ್ವದಲ್ಲಿ ಇರುವ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿ. ಒಬ್ಬ ವಿದ್ಯಾವಂತ ಯುವಕ, ದೂರದೃಷ್ಟಿಯುಳ್ಳ ನಾಯಕ ಹೆಂಗಿರಬೇಕು ಎಂದರೆ ಇಂದಿನ ಮೈಸೂರು ಮಹಾರಾಜರ ರೀತಿ ಇರಬೇಕು. ಮೈಸೂರು ಮಹಾರಾಜರು ಕನ್ನಂಬಾಡಿ ಕಟ್ಟಿದ್ದಾರೆ. ಕೆಆರ್‌ಎಸ್ ಗೇಟ್ ಸೋರುತ್ತಿತ್ತು. ಅದನ್ನು ತಡೆಯಲು ಗೋಣಿ ಚೀಲ ಇಟ್ಟಿದ್ದಾರೆ. ನಾನು ನೀರಾವರಿ ಮಂತ್ರಿಯಾಗಿದ್ದಾಗ ಅದನ್ನು ತಡೆಯಲು ಅಲ್ಲಿಗೆ ಹೋದಾಗ ಇಂಜಿನಿಯರ್ ಅದು ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣ ಮಾಡಿದ್ದು, ಮುಟ್ಟಿದರೆ ನೀವು ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೆದರಿಸಿದರು. ನಾನು ಅವರ ಮಾತು ಕೇಳಿ ಸುಮ್ಮನೆ ಮನೆಗೆ ಹೋಗಿದ್ದೆ ರಾತ್ರಿ ನಿದ್ದೆ ಬರಲಿಲ್ಲ. ನಾನು ಒಬ್ಬ ಇಂಜಿನಿಯರ್ ಆಗಿ ಯೋಚಿಸಲಿಲ್ಲ ಎಂದು ಬೇಸರ ಮಾಡಿಕೊಂಡೆ ರಾತ್ರಿ ಇಂಜಿನಿಯರ್‌ಗೆ ಕಾಲ್ ಮಾಡಿ ಗೇಟ್ ಬದಲಾಯಿಸಿದೆ. ಅದೇ ರೀತಿ ವಾಣಿ ವಿಲಾಸ್ ಡ್ಯಾಮ್ ತುಂಬಿಸುವ ಕೆಲಸ ಮಾಡಿದೆ. ನನ್ನ ಮೇಲೆ ಮೈಸೂರು ಮಹಾರಾಜರ ಆಶೀರ್ವಾದ ಇದೆ ಎಂದು ಭಾವಿಸಿದ್ದೇನೆ. ಸಮಾಜದಲ್ಲಿ ಎರಡು ರೀತಿಯ ರಾಜಕಾರಣಿಗಳು ಇರುತ್ತಾರೆ. ಶಾಸಕ ಬಾಲಕೃಷ್ಣ ಅವರು ಪ್ರೀತಿಯಿಂದ ಎಲ್ಲ ಸರ್ಕಾರಗಳಲ್ಲಿಯೂ ಕೆಲಸ ಮಾಡಿಸಿಕೊಳ್ಳುತ್ತಾರೆ ಎಂದರು.
ನನ್ನ ರಾಜಕೀಯ ಗುರುಗಳು ನನಗೆ ಮಾರ್ಗದರ್ಶನ ಮಾಡಿದ್ದು, ಮಾಜಿ ಪ್ರಧಾನಿ ದೇವೇಗೌಡರು. ಅವರ ಜೊತೆ ನಾನು ಸುಮಾರು 20 ವರ್ಷ ನಿಕಟವಾಗಿ ಕಾರ್ಯ ನಿರ್ವಹಿಸಿದ್ದೇನೆ. ಈಗ ಅವರ ಜಿಲ್ಲೆಯ ಕೆಲಸ ಮಾಡಿದ್ದು ಹೆಮ್ಮೆ ಎನಿಸಿದೆ. ಎಸ್.ಎಲ್.ಭೈರಪ್ಪನವರು ಸದಾಕಾಲ ನಮ್ಮೊಂದಿಗೆ, ದಂತಕತೆಯಾಗಿ ಇರಲಿ. ಅವರ ಬರಹ ಹಾಗೂ ಸಾಹಿತ್ಯದ ಮೂಲಕ ಸದಾ ಜೀವಂತವಾಗಿರುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ, ಶಾಸಕ ಸಿ.ಎನ್. ಬಾಲಕೃಷ್ಣ, ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.