ನವೀನ್ ಮೃತದೇಹ ತರುವ ಪ್ರಯತ್ನ ನಡೆಯುತ್ತಿದೆ
ಬೆಂಗಳೂರು: ರಷ್ಯಾ-ಉಕ್ರೇನ್ ಯುದ್ದದಲ್ಲಿ ಸಾವನ್ನಪ್ಪಿದ ಕನ್ನಡಿಗ ನವೀನ್ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೀನ್ ಕುಟುಂಬಕ್ಕೆ ಪರಿಹಾರ ನೀಡುತ್ತೇವೆ. ಆದರೆ ನಮ್ಮ ಮೊದಲ ಆದ್ಯತೆ ಅವರ ಮೃತದೇಹವನ್ನು ತರಿಸುವುದಾಗಿದೆ. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದ ಅವರು, ಕುಟುಂಬ ಕೂಡಾ ದುಃಖದಲ್ಲಿ ಇದೆ. ಶವ ತರಿಸಿಕೊಡುವಂತೆ ಅವರು ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ನವೀನ್ ಶವ ಬಂದ ನಂತರ ಪರಿಹಾರ ಕೊಡುತ್ತೇವೆ ಎಂದು ತಿಳಿಸಿದರು.
ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಗೆ ಮೃತಪಟ್ಟ ಕನ್ನಡಿಗ ವಿದ್ಯಾರ್ಥಿ ನವೀನ್ ಡ್ರೆಸ್ ಹೋಲುವ ಫೋಟೋವನ್ನು ಅವರ ಸ್ನೇಹಿತರು ಕಳಿಸಿದ್ದಾರೆ. ಈ ಬಗ್ಗೆ ಉಕ್ರೇನ್ ಭಾರತೀಯ ರಾಯಭಾರಿ ಕಚೇರಿಗೆ ಮಾತನಾಡುತ್ತೇನೆ. ಮೃತದೇಹವನ್ನು ತೆಗೆದುಕೊಂಡು ಬರಲು ಎಲ್ಲಾ ಪ್ರಯತ್ನವನ್ನು ನಡೆಸುತ್ತಿದ್ದೇವೆ ಎಂದರು.
ಕನ್ನಡಿಗರು ವಾಪಸ್ ತರಲು ವೇಗ ಕೊಡುತ್ತೇವೆ. 2-3 ದಿನಗಳಲ್ಲಿ 26 ವಿಮಾನಗಳು ಬರಲಿವೆ. ಇದರಲ್ಲಿ ಕನ್ನಡಿಗರನ್ನು ಶೀಘ್ರವಾಗಿ ಕರೆಸಲು ಕ್ರಮ ತೆಗೆದುಕೊಳ್ಳುತ್ತೇವೆ. ಯುದ್ಧ ನಡೆಯುತ್ತಿರುವುದರಿಂದ ಈ ಸಮಸ್ಯೆ ಆಗುತ್ತಿದೆ. ಭಾರತ ಸರ್ಕಾರ ಪ್ಲ್ಯಾನ್ ಮಾಡಿ ವಾರ್ ಝೋನ್‍ನಿಂದ ಬೇರೆ ಬೇರೆ ಕಡೆ ಕರೆಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಉಕ್ರೇನ್‍ನಲ್ಲಿರುವ ಭಾರತೀಯರನ್ನು ಭೇಟಿಯಾಗಿ ಧೈರ್ಯ ತುಂಬಿದ ಸಿಂಧಿಯಾ
ನವೀನ್ ಸ್ನೇಹಿತರ ಆರೋಗ್ಯ ವಿಚಾರವಾಗಿ ಮಾತನಾಡಿದ ಅವರು, ಒಂದು ಮಾಹಿತಿ ನವೀನ್ ಜೊತೆ ಇದ್ದರು ಅಂತ ಇದೆ. ಇನ್ನೊಂದು ಮಾಹಿತಿ ಇರಲಿಲ್ಲ ಅಂತ ಇದೆ. ಇಂದು ಸಂಪೂರ್ಣ ಮಾಹಿತಿ ಈ ಬಗ್ಗೆ ಪಡೆದುಕೊಳ್ಳುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ರಷ್ಯಾ ದಾಳಿಗೆ ಮೃತಪಟ್ಟ ಕನ್ನಡಿಗ ನವೀನ್ ಮೃತದೇಹ ಪತ್ತೆ
ಕಾಂಗ್ರೆಸ್ ಟೀಕೆ ವಿಚಾರವಾಗಿ ಮಾತನಾಡಿ, ವಾರ್ ಝೋನ್ ಇರುವಾಗ ಕಾಂಗ್ರೆಸ್ ರಾಜಕಾರಣ ಮಾಡುತ್ತಾರೆ ಎಂದರೆ ಎಷ್ಟು ಕೆಳಗೆ ಇಳಿದ್ದಿದ್ದಾರೆ ಅಂತ ಗೊತ್ತಾಗುತ್ತದೆ. ಕಾಂಗ್ರೆಸ್ ಇದ್ದಾಗ ಎಷ್ಟೋ ಯುದ್ಧ ಆಗಿತ್ತು. ಆದರೆ ಅವರು ಒಬ್ಬರನ್ನು ಕರೆದುಕೊಂಡು ಬಂದಿಲ್ಲ. ಆದರೆ ಈಗ ಟೀಕೆ ಮಾಡುತ್ತಿದ್ದಾರೆ. ಮೋದಿ ಸರ್ಕಾರ ನಿರಂತರ ಪ್ರಕ್ರಿಯೆ ಮಾಡುತ್ತಿದೆ. 2-3 ದಿನಗಳಲ್ಲಿ 26 ವಿಮಾನಗಳು ಬರುತ್ತಿದೆ. ಆದರೆ ಕಾಂಗ್ರೆಸ್ ರಾಜಕೀಯ ಮಾತ್ರ ಮುಖ್ಯವಾಗಿದೆ. ಇದು ಕಾಂಗ್ರೆಸ್ ಎಷ್ಟು ಕೆಳಗೆ ಇಳಿದಿದೆ ಅಂತ ತೋರಿಸುತ್ತದೆ ಎಂದು ಕಿಡಿಕಾರಿದರು.