ಬೆಂಗಳೂರು: ಕೊರೊನಾ, ಓಮಿಕ್ರಾನ್ ಸೋಂಕು ವೇಗವಾಗಿ ಹರಡುತ್ತಿದೆ. ನಾಳೆ ಸಂಜೆ ತಜ್ಞರ ಜೊತೆ ಸಭೆ ಮಾಡಿ ದೀರ್ಘಾವಧಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ಬಗ್ಗೆ ಗಮನ ಹರಿಸುತ್ತಿದ್ದೇವೆ. ಸೋಂಕು ವೇಗವಾಗಿ ಹರಡುತ್ತಿದೆ. ತಜ್ಞರ ಜೊತೆ ಚರ್ಚೆ ಅವಶ್ಯಕತೆ ಇದ್ದು, ನಾಳೆ ಸಂಜೆ ತಜ್ಞರ ಜೊತೆ ಸಭೆಮಾಡುತ್ತೇವೆ. ಗುರುವಾರ ಕ್ಯಾಬಿನೆಟ್‍ನಲ್ಲಿ ಮಹತ್ವದ ತೀರ್ಮಾನದ ಜೊತೆಗೆ ದೀರ್ಘಾವಧಿ ಕ್ರಮ ತೆಗೆದುಕೊಳ್ಳುತ್ತೇವೆ. ಜನರಿಗೆ ತೊಂದರೆ ಆಗದಂತೆ ಕ್ರಮ ತತೆದುಕೊಳ್ಳುತ್ತೇವೆ ಎಂದಿದ್ದಾರೆ.
ಇವತ್ತು 15-18 ವರ್ಷದವರಿಗೆ ಲಸಿಕೆ ಇದೆ, ಶಾಲಾ-ಕಾಲೇಜುಗಳಲ್ಲಿ ಲಸಿಕೆ ಕೊಡುತ್ತಿದ್ದೇವೆ. ಇದನ್ನು ಅಭಿಯಾನ ರೂಪದಲ್ಲಿ ಮಾಡಬೇಕು. ಎಲ್ಲರೂ ಕೂಡಾ ಲಸಿಕೆ ಅಭಿಯಾನಕ್ಕೆ ಕೈ ಜೋಡಿಸಿ. ಜನರು ಸ್ವಯಂ ನಿಯಂತ್ರಣ ಹಾಕೋಬೇಕು, ಕೋವಿಡ್ ನಿಯಮ ಪಾಲನೆ ಮಾಡಬೇಕಾಗಿದೆ. ಆರೋಗ್ಯದ ಬಗ್ಗೆ ಜನ ಕಾಳಜಿವಹಿಸಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಂಜನಾ ಗಲ್ರಾನಿ
ಮೇಕೆದಾಟು ಪಾದಯಾತ್ರೆಯಲ್ಲಿ ಸಾವಿರಾರು ಜನ ಸೇರುವ ವಿಚಾರವಾಗಿ ಮಾತನಾಡಿ, ಸರ್ಕಾರ ಏನೇ ನಿರ್ಧಾರ ಮಾಡಿದ್ರು ಅದು ಕಾಂಗ್ರೆಸ್ ಪಾದಯಾತ್ರೆಗೂ ಅನ್ವಯಿಸುತ್ತದೆ ಎಂದು ಖಡಕ್ ಸೂಚನೆ ನೀಡಿದ್ದಾರೆ.