– ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್‌ಗೆ ಕುಸ್ತಿ ಫೈನಲ್ ಸ್ಪರ್ಧೆಗೆ ಅನರ್ಹಗೊಳಿಸಿರುವುದು ದೊಡ್ಡ ಅನ್ಯಾಯ
ಬೆಂಗಳೂರು: ಅಂತಾರಾಷ್ಟ್ರೀಯ ಕುಸ್ತಿ ಪಟು ವಿನೇಶ್ ಫೋಗಟ್ (Vinesh Phogat) ಅವರಿಗೆ ಒಲಿಪಿಂಕ್ಸ್ ಕುಸ್ತಿ ಫೈನಲ್ ಪಂದ್ಯದ ಮೊದಲು ಅವರ ತೂಕ ಕೇವಲ 100 ಗ್ರಾಂ ಹೆಚ್ಚಳವಾಗಿದೆ ಎಂದು ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಿರುವುದು ದೊಡ್ಡ ಅನ್ಯಾಯ. ಒಲಿಂಪಿಕ್ಸ್ ಗೇಮ್‌ನ ಕಾನೂನು ಪುನರ್ ವಿಮರ್ಶೆ ಮಾಡುವುದು ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.
Advertisement
ಅಂತಾರಾಷ್ಟ್ರೀಯ ಕುಸ್ತಿಪಟು ವಿನೇಶ್ ಫೋಗಾಟ್ ಅವರಿಗೆ ಒಲಿಂಪಿಕ್ ಫೈನಲ್‌ನಲ್ಲಿ ಅವಕಾಶ ತಪ್ಪಿರುವ ಕುರಿತು ಇಂದು ನವದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಸಾಮಾನ್ಯವಾಗಿ ಯಾವುದಾದರೂ ಆಟದ ಆರಂಭದಲ್ಲಿ ತೂಕ ಮತ್ತು ಇತರ ಅರ್ಹತೆಗಳನ್ನು ನೋಡುತ್ತಾರೆ. ಆದರೆ, ಪ್ರತಿಯೊಂದು ರೌಂಡ್‌ನಲ್ಲಿಯೂ ತೂಕ ನೋಡುವುದು ಬೇರೆ ಯಾವುದೇ ಆಟದಲ್ಲಿ ನೋಡಿಲ್ಲ. ಈ ಒಲಿಂಪಿಕ್ಸ್‌ನಲ್ಲಿ ತೂಕ ನೋಡಿರುವುದು ಪ್ರಶ್ನಾರ್ಹವಾಗಿದೆ. ಪ್ರತಿದಿನ ವ್ಯಕ್ತಿಯ ತೂಕದಲ್ಲಿ ನೂರರಿಂದ ಮುನ್ನೂರು ಗ್ರಾಂ ವ್ಯತ್ಯಾಸವಾಗುತ್ತಿರುತ್ತದೆ. ಅವರ ತೂಕದಲ್ಲಿ ನೂರು ಗ್ರಾಂ ಹೆಚ್ಚಾಗಿದೆ ಎಂದು ಸ್ಪರ್ಧೆಯಿಂದ ಅಮಾನತು ಮಾಡುವುದು ಸಮಂಜಸ ಅಲ್ಲ. ಪ್ರತಿದಿನ ಮನುಷ್ಯನ ದೇಹದ ತೂಕದಲ್ಲಿ ಹೆಚ್ಚಾಗುವುದು ಕಡಿಮೆಯಾಗುವುದು ತನ್ನದೇ ಆದ ನೈಸರ್ಗಿಕ ಮೆಟಾಬಲಿಕ್ ಪ್ರಕ್ರಿಯೆ. ಮೆಟಾಬೆಲಿಕ್ ಚಟುವಟಿಕೆಗಳು ಕಡಿಮೆ ಆದಾಗ ತೂಕ ಹೆಚ್ಚಾಗುತ್ತದೆ. ಮೆಟಾಬೆಲಿಕ್ ಚಟುವಟಿಕೆಗಳು ಹೆಚ್ಚಾದಾಗ ತೂಕ ಕಡಿಮೆ ಆಗುತ್ತದೆ. ಇದು ನೈಸರ್ಗಿಕ ಕ್ರಿಯೆ. ಹೀಗಾಗಿ ತೂಕ ಹೆಚ್ಚಳದ ಹಿನ್ನೆಲೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡದಿರುವುದು ಬಹಳ ದೊಡ್ಡ ಅನ್ಯಾಯವಾದಂತಾಗಿದ್ದು, ಇದನ್ನು ಪುನರ್ ಪರಿಶೀಲನೆ ಮಾಡುವುದು ಅಗತ್ಯ ಎಂದು ಬೊಮ್ಮಾಯಿ ಆಗ್ರಹಿಸಿದರು. ಇದನ್ನೂ ಓದಿ: Paris Olympics 2024 | ಅನರ್ಹಗೊಂಡ ಕೆಲವೇ ನಿಮಿಷಗಳಲ್ಲಿ ವಿನೇಶ್ ಆಸ್ಪತ್ರೆಗೆ ದಾಖಲು
Advertisement
Advertisement
ಒಲಿಂಪಿಕ್ಸ್ ಕ್ರೀಡಾಕೂಟ ಕ್ಲೀನ್ ಅಂತಾ ಏನಿಲ್ಲ. ಅಲ್ಲಿಯೂ ಕೂಡ ಕೆಲವು ಸಾರಿ ರಾಜಕೀಯ ನಡೆಯುತ್ತದೆ. ಕೆಲವರನ್ನು ಹೊರಗಿಡುವ ತಂತ್ರಗಾರಿಕೆ ನಡೆಯುತ್ತದೆ. ಆ ಹಿನ್ನೆಲೆಯಲ್ಲಿ ಕೆಲವರಿಗೆ ಶಿಕ್ಷೆ ಕೂಡ ಆಗಿದೆ. ಈ ಪ್ರಕರಣವನ್ನು ಕೇಂದ್ರ ಕ್ರೀಡಾ ಸಚಿವರು ಗಂಭೀರವಾಗಿ ತೆಗೆದುಕೊಂಡು ಒಲಿಂಪಿಕ್ಸ್ ಬೋರ್ಡ್‌ಗೆ ತೆಗೆದುಕೊಂಡು ಹೋಗಬೇಕು. ಯಾವುದೇ ಕಾರಣಕ್ಕೂ ವಿನೇಶ್ ಫೋಗಾಟ್ ಕುಸ್ತಿ ಫೈನಲ್ ಆಡುವುದರಿಂದ ವಂಚಿತರಾಗಬಾರದು. ಅವರಿಗೆ ಅವಕಾಶ ದೊರಕುವಂತೆ ನೋಡಿಕೊಳ್ಳಬೇಕು. ಇದು ಎಲ್ಲ ಭಾರತೀಯರ ಭಾವನೆಯಾಗಿದೆ ಎಂದು ಹೇಳಿದರು.
Advertisement
ಕಳೆದ ಬಾರಿಯೂ ವಿನೇಶ್ ಫೋಗಾಟ್ ಸ್ಪರ್ಧೆಯಿಂದ ದೂರ ಉಳಿಯುವಂತಾಗಿತ್ತು. ಈ ಬಾರಿಯಂತೂ ದೊಡ್ಡ ಅನ್ಯಾಯವಾಗಿದ್ದು, ಈ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನಗಳು ನಡೆಯಬೇಕು. ಅವರಿಗೆ ಅವಕಾಶ ದೊರೆಯಬೇಕು. ಅವರಿಗೆ ಫೈನಲ್‌ನಲ್ಲಿ ಅವಕಾಶ ದೊರೆತರೆ ಚಿನ್ನದ ಪದಕ ಗೆಲ್ಲುವ ವಿಶ್ವಾಸ ಇದೆ. ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಾಟ್ ಚಿನ್ನದ ಪದಕ ತರುತ್ತಾರೆ ಎನ್ನುವ ವಿಶ್ವಾಸ ಎಲ್ಲರದ್ದಾಗಿದೆ. ಇಲ್ಲದಿದ್ದರೆ ಭಾರತಕ್ಕೆ ಚಿನ್ನದ ಪದಕ ಸಿಗುವುದು ಬಹಳ ಕಷ್ಟಕರ ಅನಿಸುತ್ತಿದೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಒಲಿಂಪಿಕ್ಸ್ ಮಂಡಳಿಯಲ್ಲಿ ಚರ್ಚಿಸಿ ತೀರ್ಮಾನ ಮಾಡುವ ಅಗತ್ಯವಿದೆ ಎಂದು ಹೇಳಿದರು. ಇದನ್ನೂ ಓದಿ: ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್: ವಿನೇಶ್‌ಗೆ ಸಮಾಧಾನ ಹೇಳಿದ ಮೋದಿ