-ನೀತಿ ಸಂಹಿತಿ ಉಲ್ಲಂಘಿಸಿದ್ದು ಸಚಿವರು, ಪೇದೆಗಳಿಗೆ ಅಮಾನತು ಶಿಕ್ಷೆ
ಮಂಡ್ಯ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಕಾರ್ ತಪಾಸಣೆ ನಡೆಸಿಲ್ಲ ಎಂದು ಕರ್ತವ್ಯ ಲೋಪ ಆರೋಪದಡಿ ಇಬ್ಬರು ಪೇದೆಗಳನ್ನು ಎಸ್‍ಪಿ ಪರಶುರಾಮ್ ಅಮಾನತು ಮಾಡಿದ್ದಾರೆ.
ಶ್ರೀನಿವಾಸ್ ಮತ್ತು ಗೌರಮ್ಮ ಅಮಾನುತುಗೊಂಡ ಮದ್ದೂರು ಸಂಚಾರಿ ಠಾಣೆ ಪೇದೆಗಳು. ನವೆಂಬರ್ 20ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ನಿಡಘಟ್ಟ ಸಮೀಪದ ಚೆಕ್ ಪೋಸ್ಟ್ ಬಳಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತೆರಳುತ್ತಿದ್ದರು. ಈ ವೇಳೆ ಪೇದೆ ಕಾರ್ ನಿಲ್ಲಿಸುವಂತೆ ಸೂಚಿಸಿದ್ದರು. ಪೇದೆ ಹೇಳದನ್ನ ಲೆಕ್ಕಿಸದ ಸಚಿವರು ಕಾರು ನಿಲ್ಲಿಸದೇ ಹೋಗಿದ್ದರು. ಈ ಸಂಬಂಧ ಗೃಹ ಸಚಿವರ ಕಾರು ಚಾಲಕನ ವಿರುದ್ಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಮಂಡ್ಯ ಎಸ್‍ಪಿ, ಸಚಿವರ ಕಾರ್ ಪರಿಶೀಲನೆ ನಡೆಸಿಲ್ಲ ಎಂದು ಅಮಾನತುಗೊಳಿಸಿ ಆದೇಶ ನೀಡಿದ್ದಾರೆ. ನವೆಂಬರ್ 20ರಂದು ಎರಡು ಕಡೆ ಚೆಕ್ ಪೋಸ್ಟ್ ಸಿಬ್ಬಂದಿ ಬೆಂಗಳೂರಿಂದ ಮೈಸೂರಿನತ್ತ ತೆರಳುತ್ತಿದ್ದ ಬಸವರಾಜ್ ಅವರ ವಾಹವನ್ನು ತಡೆದಿದ್ದರು. ಸಚಿವರು ವಾಹನ ನಿಲ್ಲಿಸದೇ ನಿಡಘಟ್ಟ ಹಾಗೂ ಮಂಡ್ಯ ತಾಲೂಕಿನ ಹನಕೆರೆ ಬಳಿ ನೀತಿ ಸಂಹಿತೆ ಉಲ್ಲಂಘಿಸಿದ್ದರು. ಇದೀಗ ಮಾಡದ ತಪ್ಪಿಗೆ ಪೇದೆಗಳು ಅಮಾನತುಗೊಂಡಿದ್ದಾರೆ.