ರಾಹುಲ್ ಗಾಂಧಿ ಒಬ್ಬ ಅರೆ ಹುಚ್ಚ, ಅಯೋಗ್ಯ ಯತ್ನಾಳ್ ವ್ಯಂಗ್ಯ

Public TV
2 Min Read
Rahul Gangi Basangouda Patil Yatnal

– ಕುಮಾರಸ್ವಾಮಿಗೆ ಬೇಜಾರಾಗಿದ್ದರೆ ರಾಜೀನಾಮೆ ನೀಡಲಿ
– ಎಚ್‍ಡಿಡಿ ಯಾರ ತಲೆಯ ಮೇಲೆ ಕೈ ಇಡ್ತಾರೋ ಅವರ ಕಥೆ ಮುಗಿದಂತೆ

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಅರೆ ಹುಚ್ಚ, ಅವರಿಗೆ ಮೆದುಳು ಇದೆಯೋ, ಇಲ್ಲವೋ ಗೊತ್ತಾಗುತ್ತಿಲ್ಲ. ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸುವುದು ಉತ್ತಮ ಎಂದು ಶಾಸಕ ಬಸನಗೌಡ್ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.

ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಹುಲ್ ಗಾಂಧಿ ಲೋಕಸಭೆಯಲ್ಲಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅರ್ಥವೇ ಇಲ್ಲದ ಹೇಳಿಕೆ ನೀಡುತ್ತಿದ್ದಾರೆ. ಬಂಗಾರವನ್ನು ಲೀಟರ್ ನಲ್ಲಿ ಮಾಪನ ಮಾಡುವುದು, ಬಟಾಟೆಯಿಂದ ಬಂಗಾರ ಮಾಡುವುದು ಸೇರಿದಂತೆ ಅನೇಕ ವಿಚಿತ್ರ ಹೇಳಿಕೆ ನೀಡುತ್ತಿದ್ದಾರೆ. ಹೀಗೆ ಯಾವುದೇ ಅರೆ ಹುಚ್ಚರೂ ಹೇಳಿಕೆ ನೀಡುವುದಿಲ್ಲ ಎಂದು ಕಿಡಿಕಾರಿದರು.

 

Basangouda Patil Yatnal 1

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆರೋಪ ಹೊರೆಸುತ್ತಿರುವ ಅಯೋಗ್ಯ ವ್ಯಕ್ತಿ ನೇತೃತ್ವದ ಕಾಂಗ್ರೆಸ್ ಪಕ್ಷವು ದೇಶದ ಜನತೆಯನ್ನು ಕ್ಷಮೆ ಕೇಳಬೇಕು. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ಸಿಗೆ ರಾಹುಲ್ ಗಾಂಧಿ ಅಧ್ಯಕ್ಷರಾಗಿರುವುದು ದುರಂತ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ಪ್ರಕರಣಗಳು ನಡೆದಿಲ್ಲ. ಆದರೆ ಕಾಂಗ್ರೆಸ್ ನಾಯಕರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದೇ ರೀತಿ ಹೇಳಿಕೆ ಮುಂದುವರಿಸಿದರೆ ನಾವು ರಾಜ್ಯದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಹಿಂದಿನ ಕಾಂಗ್ರೆಸ್ ಸರ್ಕಾರ ಅನೇಕ ಹಗರಣಗಳಲ್ಲಿ ಭಾಗಿಯಾಗಿತ್ತು. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಹೆರಾಲ್ಡ್ ಪತ್ರಿಕೆ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಹೀಗಿದ್ದರೂ ಪ್ರತಿ ಭಾಷಣದಲ್ಲಿಯೂ ರಫೆಲ್ ವಿಮಾನದ ಬಗ್ಗೆ ಮಾತನಾಡುತ್ತಾರೆ. ಅವರು ನೀಡುತ್ತಿರುವ ಅಂಕಿ ಸಂಖ್ಯೆಗೆ ತಾಳ-ಮೇಳವೇ ಇಲ್ಲ ಎಂದು ಟೀಕಿಸಿದರು.

BGK YATNAL

ಜೆಡಿಎಸ್ ವಿರುದ್ಧ ವಾಗ್ದಾಳಿ:
ಕಾಂಗ್ರೆಸ್ ಬಳಿಕ ಜೆಡಿಎಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಶಾಸಕರು, ಜೆಡಿಎಸ್ ಶಾಸಕರು ಹಾಗೂ ನಾಯಕರು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರ ಕುಟುಂಬದಿಂದ ಹೊರಗೆ ಬರುವ ಪರಿಸ್ಥಿತಿಯಲ್ಲಿ ಇಲ್ಲ. ಒಂದು ವೇಳೆ ಹೊರಗೆ ಬಂದರೆ ಅವರನ್ನು ಮುಗಿಸಿ ಬಿಡುತ್ತಾರೆ. ದೇವೇಗೌಡ ಅವರು ಯಾರ ತಲೆಯ ಮೇಲೆ ಕೈ ಇಡುತ್ತಾರೋ ಅವರ ಕಥೆ ಮುಗಿದಂತೆ. ಇಂತಹ ದುರಂತಕ್ಕೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ಬೈರೇಗೌಡ, ನಾಗೇಗೌಡ, ಎಸ್.ಆರ್. ಬೊಮ್ಮಾಯಿ ಅವರನ್ನು ಸೇರಿದಂತೆ ಅನೇಕ ನಾಯಕರು ಬಲಿಯಾಗಿದ್ದಾರೆ. ಈಗಲೂ ದೇವೇಗೌಡ ಅವರ ಕುಟುಂಬಕ್ಕೆ ಜೆಡಿಎಸ್ ಪಕ್ಷದ ನಾಯಕರು ನಿಷ್ಟೇ ತೋರಬೇಕು. ಹೀಗಾಗಿ ಅವರು ಕುಮಾರಸ್ವಾಮಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ ಎಂದರು.

hdk rahul gandhi

ಮುಖ್ಯಮಂತ್ರಿ ಸ್ಥಾನದಲ್ಲಿರುವ ಎಚ್.ಡಿ.ಕುಮಾರಸ್ವಾಮಿ ಅವರು ದಂಗೆಗೆ ಪ್ರಚೋದನೆ ನೀಡುವುದು ಸರಿಯಲ್ಲ. ಕುಮಾರಸ್ವಾಮಿ ಅವರನ್ನು ಸಮೀಪದಿಂದ ನೋಡಿದ್ದೇನೆ. ಅವರು ಸುಳ್ಳು ಕಾಗದ ಪತ್ರಗಳನ್ನು ಸೃಷ್ಟಿಸಿ, ಇತರರನ್ನು ಹೆದರಿಸುತ್ತಾರೆ. ಈಗಾಗಲೇ ಅವರ ಸುತ್ತ ಅನೇಕ ಹಗರಣಗಳಿದ್ದು, ಜಂತಕಲ್ ಮೈನಿಂಗ್ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ. ಸದ್ಯದಲ್ಲಿಯೇ ಕುಮಾರಸ್ವಾಮಿ ಜೈಲು ಸೇರಲಿದ್ದಾರೆ ಎಂದು ಯತ್ನಾಳ್ ಭವಿಷ್ಯ ನುಡಿದರು.

ನೀವು ಹೇಗೆ ಮಾತನಾಡಿದಂತೆ ನಾವು ಹಾಗೇ ಮಾತನಾಡುತ್ತೇವೆ. ನಿಮ್ಮ ಹೇಳಿಕೆಗಳಿಗೆ ಯಾವ ಶೈಲಿಯಲ್ಲಿ ಟಾಂಗ್ ಕೊಡಬಹುದು ಅಂತ ನಮಗೂ ಗೊತ್ತಿದೆ. ನಿಮಗೆ ನೋವಾಗಿದ್ದರೆ, ಬೇಜಾರಾಗಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಕಿಡಿಕಾರಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

HDD

Share This Article
Leave a Comment

Leave a Reply

Your email address will not be published. Required fields are marked *