– ದೇವೇಗೌಡರ ಕುಟುಂಬ ರಾಜಕಾರಣದಲ್ಲಿ ಮುಳುಗಿದೆ
ಹುಬ್ಬಳ್ಳಿ: ಉತ್ತರ ಕರ್ನಾಟಕ ಕಾಂಗ್ರೆಸ್‍ನಲ್ಲಿ ಗಂಡಸರು ಇಲ್ಲ. ಹೀಗಾಗಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಕುಂದಗೋಳ ಕ್ಷೇತ್ರದಲ್ಲಿ ಪ್ರಚಾರಕ್ಕೆ ಕರೆ ತಂದಿದ್ದಾರೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಶಾಸಕರು, ಸಿಎಂ ಕುಮಾರಸ್ವಾಮಿಯವರು ಸೈನ್ಯಕ್ಕೆ ಸೇರುವ ಯುವಕರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಆದರೆ ಅವರ ಶಾಸಕರು ಸೀತಾರಾಮ ಕಲ್ಯಾಣ ಸಿನಿಮಾ ಟಿಕೆಟ್ ಹಂಚುವುದರಲ್ಲಿಯೇ ಕಾಲ ಕಳೆದರು ಎಂದು ಕುಟುಕಿದರು.
ನಿಖಿಲ್ ಎಲ್ಲದೀಯಪ್ಪಾ ಅಂತ ಸಿಎಂ ಕುಮಾರಸ್ವಾಮಿಯವರು ಕೇಳುತ್ತಾರೆ. ಆಗ ನಿಖಿಲ್, ನಮ್ಮ ತಾತ ತೆಲೆ ಬೊಳಿಸಿದ ಜನರ ಮಧ್ಯದಲ್ಲಿಯೇ ಇದ್ದೀನಿ ಅಪ್ಪಾ ಅಂತ ಹೇಳುತ್ತಾನೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಹೋ… ನೀನು ಈಗಾಗಲೇ ಜನರ ತಲೆ ಬೋಳಿಸಲು ಪ್ರಾರಂಭಿಸಿದಿಯಾ ಅಂತ ಪ್ರಶ್ನಿಸುತ್ತಾರೆ ಎಂದು ಶಾಸಕರು ವ್ಯಂಗ್ಯವಾಡಿದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಈಗ 90 ವಯಸ್ಸು. ಆದರೂ ಚುನಾವಣೆಗೆ ನಿಲ್ಲುತ್ತಾರೆ. ಅಷ್ಟೇ ಅಲ್ಲದೆ ಇಬ್ಬರು ಮೊಮ್ಮಕ್ಕಳಿಗೂ ಟಿಕೆಟ್ ಕೊಡಿಸಿದ್ದಾರೆ. ಇತ್ತ ಇಬ್ಬರು ಮಕ್ಕಳು, ಒಬ್ಬ ಸೊಸೆ ವಿಧಾನಸಭಾ ಸದಸ್ಯರು. ಒಂದು ವೇಳೆ ದೇವೇಗೌಡರಿಗೆ 28 ಜನ ಮೊಮ್ಮಕ್ಕಳು ಇದ್ದಿದ್ದರೆ ಅವರನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸುತ್ತಿದ್ದರು ಎಂದು ಲೇವಡಿ ಮಾಡಿದರು.
ಕರ್ನಾಟಕದ ಭವಿಷ್ಯ ನಿರ್ಧರಿಸುವ ಜವಾಬ್ದಾರಿ ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಜನತೆಯ ಕೈಯಲ್ಲಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಎರಡೂ ಕ್ಷೇತ್ರಗಳನ್ನು ಮಾದರಿ ಕ್ಷೇತ್ರವಾಗಿ ಮಾಡಲು ಹೆಚ್ಚಿನ ಅನುದಾನ ನೀಡುವಂತೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಒತ್ತಾಯಿಸುತ್ತೇನೆ ಎಂದು ಭರವಸೆ ನೀಡಿದರು.