ವಿಜಯಪುರ: ಸಚಿವ ಸಂಪುಟ ಹಾಗೂ ಬಿಜೆಪಿ ಪಕ್ಷ ಸಂಘಟನೆಯಲ್ಲಿ ಬದಲಾವಣೆಯಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಕ್ರಾಂತಿ ಬಳಿಕ ಮೋದಿ ದೊಡ್ಡ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಬಲಪಡಿಸಲು ಈ ಬದಲಾವಣೆಯಾಗಲಿದೆ. ಪ್ರಧಾನಿ ಅವರ ಗುಪ್ತಚರ ಇಲಾಖೆ ರಾಜ್ಯದ ಪರಿಸ್ಥಿತಿಗಳನ್ನೆಲ್ಲಾ ಗಮನಿಸುತ್ತಿದೆ. ಯಾವ ಸಚಿವರು ಕಚೇರಿಗೆ ಭೇಟಿ ನೀಡುತ್ತಾರೆ, ಯಾರು ನೀಡಲ್ಲ ಎನ್ನುವುದು ಸೇರಿದಂತೆ ಎಲ್ಲಾ ಬೆಳವಣಿಗೆಯ ಕುರಿತು ಪ್ರಧಾನಿ ಗಮನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಹಾಗೂ ಸರ್ಕಾರದಲ್ಲಿ ನೂತನ ಬದಲಾವಣೆ ಮಾಡಲಿದ್ದಾರೆ. ಕಳೆದ ಸಂಕ್ರಾಂತಿಗೆ ಹೇಳಿದ್ದೆ ಅದರಂತೆ ಒಂದು ವಿಕೆಟ್ ಬಿದ್ದತ್ತು. ಈ ಬಾರಿಯೂ ಸಂಕ್ರಾಂತಿಯವರೆಗೆ ಕಾದು ನೋಡಿ ಎಂದು ಭವಿಷ್ಯ ನುಡಿದರು.
ಸಿಎಂ ವಿದೇಶ ಪ್ರವಾಸ ವದಂತಿ ವಿಚಾರವಾಗಿ ಮಾತನಾಡಿದ ಅವರು, ಮುಖ್ಯಮಂತ್ರಿ ಬೊಮ್ಮಾಯಿ ಅವರ ವೀಸಾ ಬಂದಿದ್ದರೆ ನನಗೆ ತೋರಿಸಿ. ಬೊಮ್ಮಾಯಿ ಅವರು ಫಾರಿನ್ ಟೂರ್‍ಗೆ ಹೋಗುತ್ತಿಲ್ಲ. ಹೋಗುವುದಾದರೇ ಮೊದಲೇ ಗೊತ್ತಾಗುತ್ತಿತ್ತು. ಸಿಎಂ ಪ್ರವಾಸ ಚಲನವಲನ ಸಾರ್ವಜನಿಕವಾಗಿರುತ್ತದೆ ಎಂದರು. ಇದೇ ಸಂದರ್ಭದಲ್ಲಿ ಸಿಎಂ ಬದಲಾವಣೆಯ ಕುರಿತು ಮಾತನಾಡಿದ ಅವರು, ನಾನು ಸಿಎಂ ಬದಲಾವಣೆ ಬೇಡ ಅನ್ನೋದು ಇಲ್ಲ, ಬೇಕು ಅನ್ನೋದು ಇಲ್ಲ. ಈ ವಿಚಾರ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಹೇಳಿದರು. ಇದನ್ನೂ ಓದಿ: ರಾಜ್ಯದ 58 ಪುರಸಭೆ, 57 ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಇಂದು
ಮತ್ತೆ ಸಚಿವ ಸ್ಥಾನದ ಆಸೆ ವ್ಯಕ್ತಪಡಿಸಿದ ಯತ್ನಾಳ್, ಗಟ್ಸ್ ಇರೋರು ಗೃಹ ಸಚಿವರಾಗಬೇಕು. ನಮ್ಮಂಥವರ ಕೈಗೆ ಅಧಿಕಾರ ಕೊಟ್ಟರೆ ಸೂಕ್ತ ಆಡಳಿತ ನಡೆಸುತ್ತೇವೆ. ಜೊತೆಗೆ ದೇಶ ವಿರೋಧಿ ಚಟುವಟಿಕೆ ಮಾಡುವವರಿಗೆ ಹಾಗೂ ಉಪಾದ್ಯಾಪಿಗಳ ವಿರುದ್ಧ ಸರಿಯಾದ ಕ್ರಮ ತೆಗೆದುಕೊಳ್ಳುತ್ತೇವೆ. ಈಗಿನ ಗೃಹಮಂತ್ರಿ ಒಳ್ಳೆಯವರು ಹಾಗೂ ಪ್ರಾಮಾಣಿಕರಾಗಿದ್ದಾರೆ. ಆದರೆ ಆರಗ ಜ್ಞಾನೇಂದ್ರ ಅವರು ಅರಣ್ಯ, ಕಂದಾಯ, ಗ್ರಾಮೀಣಾಭಿವೃದ್ಧಿಗೆ ಸೂಕ್ತರಿದ್ದಾರೆ ಎಂಬ ಅಭಿಪ್ರಾಯಪಟ್ಟರು. ಇದನ್ನೂ ಓದಿ: ಪಾದಯಾತ್ರೆಗೆ ಭಾಗವಹಿಸಿ ಏನು ಮಾಡಲಿ ಹೇಳಿ: ಡಿಕೆಶಿಗೆ ಟಾಂಗ್ ಕೊಟ್ಟ HDK