ಬೆಂಗಳೂರು: ಪ್ರವಾಹ ಸಂತ್ರಸ್ತರ ಪರವಾಗಿ ನಾನು ಗಟ್ಟಿ ಧ್ವನಿ ತೆಗೆದಿದ್ದು, ಯಾರಿಂದಲೂ ನನ್ನ ಧ್ವನಿಯನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಡಕ್ ಆಗಿ ಹೇಳಿದ್ದಾರೆ.

ಕಣ್ಣೀರು ಹಾಕುತ್ತಿರುವ ಜನರ ಧ್ವನಿಯಾಗಿ ನಾನು ಮಾತನಾಡಿದ್ದೇನೆ. ಯಾವುದೇ ಹುದ್ದೆ ಅಥವಾ ಅಧಿಕಾರಕ್ಕೆ ಆಸೆ ಬಿದ್ದು ಈ ರೀತಿ ಮಾತನಾಡಿಲ್ಲ. ಕನ್ನಡಿಗರ ಕಣ್ಣೀರು ದೂರ ಮಾಡಿ ಎಂದು ಪ್ರಧಾನಿಗಳ ಬಳಿ ಮನವಿ ಮಾಡಿದ್ದನ್ನು ಪಕ್ಷ ವಿರೋಧಿ ಚಟುವಟಿಕೆ ಎಂದ್ರೆ ಹೇಗೆ? ಇದು ಪಕ್ಷ ವಿರೋಧಿ ಕೆಲಸವಾಗಿದ್ದರೆ ಅದನ್ನು ನಾಡಿನ ಜನತೆಯೇ ನಿರ್ಧಾರ ಮಾಡುತ್ತಾರೆ. ಭವಿಷ್ಯದಲ್ಲಿ ಎಲ್ಲವೂ ತಿಳಿಯಲಿದ್ದು, ಅಂತಿಮವಾಗಿ ನನಗೆ ಮತದಾನ ಮಾಡುವುದು ಜನರೇ ಆಗಿದ್ದು, ಅವರೇ ತೀರ್ಮಾನಿಸುತ್ತಾರೆ ಎಂದರು.
ನನ್ನ ಬಗ್ಗೆ ಯಾರೋ ಪ್ರಧಾನಿಗಳಿಗೆ ಹಾಗೂ ರಾಷ್ಟ್ರೀಯ ಅಧ್ಯಕ್ಷರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಅಷ್ಟೇ. ನಿನ್ನೆ ರಾತ್ರಿ ನಮ್ಮ ನಾಯಕರು ಪರಿಹಾರ ಕೇಳಲು ರಾಷ್ಟ್ರೀಯ ನಾಯಕರ ಎದುರು ತೆರಳಿದ್ದರು ಎಂದು ತಿಳಿದಿದ್ದೆ. ಆದರೆ ಯತ್ನಾಳ್ ವಿರುದ್ಧ ದೂರು ನೀಡಲು ತೆರಳಿದ್ದರು ಎಂದು ಅರ್ಥವಾಗುತ್ತಿದೆ ಎಂದು ಹೇಳಿದರು.
ಡಿವಿಎಸ್ ಕೊಡುಗೆ ಏನು?
ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ಅವರನ್ನು ಜನನಾಯಕರಾಗಿ ಮಾಡಿದ್ದು ಜನರು. ಕನ್ನಡ ನಾಡಿನ ಜನರ ಕಷ್ಟವನ್ನು ಪಬ್ಲಿಕ್ ಟಿವಿ ಜನರ ಮುಂದಿಡುತ್ತಿದ್ದು, ಅದೇ ರೀತಿ ಜನಪ್ರತಿನಿಧಿಯಾಗಿ ನನ್ನ ಕರ್ತವ್ಯ ಮಾಡಿದ್ದೇನೆ. ಸೂಲಿಬೆಲೆ ಅವರ ವಿರುದ್ಧ ದೇಶದ್ರೋಹಿ ಎಂಬ ಪದ ಪ್ರಯೋಗ ಮಾಡಿದ ಸಚಿವ ಡಿವಿ ಸದಾನಂದ ಗೌಡರ ವಿರುದ್ಧ ಯಾವ ಕ್ರಮಕೈಗೊಂಡಿದ್ದಾರೆ. ಡಿವಿಎಸ್ ಅವರು ನಾಡಿಗೆ ಯಾವ ಕೊಡುಗೆ ನೀಡಿದ್ದಾರೆ? ಕೂಡಲೇ ಅವರನ್ನು ಸಂಪುಟದಿಂದ ಕೈ ಬಿಡುವ ಕಾರ್ಯವನ್ನು ಪಕ್ಷದ ನಾಯಕರು ಮಾಡಬೇಕಿದೆ. ಸೂಲಿಬೆಲೆ ಅವರ ತಪ್ಪಾದರೂ ಏನು ಮಾಡಿದ್ದಾರೆ. ಪಕ್ಷದ ಶಿಸ್ತು ಶಿಸ್ತು ಎಂದು ಹೇಳಿ ಜನರ ನೋವಿಗೂ ಧ್ವನಿಯಾಗದೇ ಇದ್ದಾರೆ ಹೇಗೆ ಎಂದು ಪ್ರಶ್ನಿಸಿದರು.
ಬಿಜೆಪಿ ಪಕ್ಷದ ಕಾರ್ಯಕರ್ತರು ಬಲಿಷ್ಠವಾಗಿದ್ದು, ನನಗೆ ನೀಡಿರುವ ನೋಟಿಸ್‍ಗೆ ಸರಿಯಾದ ಉತ್ತರ ನೀಡುತ್ತೇನೆ. ವಿನಃ ಅವರು ನೀಡಿದ ನೋಟಿಸ್ ಕೂಡಲೇ ಕ್ಷಮೆ ಕೋರಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.



