ದಾವಣಗೆರೆ: ಕಾಂಗ್ರೆಸ್‍ನವರಿಗೆ (Congress) ಪಾಕಿಸ್ತಾನದವರು ಫ್ರೀ ವೀಸಾ ಕೊಡ್ತಾರೆ, ಶಾಸಕ ಕೊತ್ತೂರು ಮಂಜುನಾಥ್ (Kothur Manjunath) ಹೋಗಿ ಭಾರತೀಯ ಸೇನೆ ದಾಳಿ ನಡೆಸಿದ ಜಾಗಗಳನ್ನು ನೋಡಿಕೊಂಡು ಬರಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಕಿಡಿಕಾರಿದ್ದಾರೆ.
ದಾವಣಗೆರೆಯಲ್ಲಿ (Davanagere) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಕೊತ್ತೂರು ಮಂಜುನಾಥ್ ಅವರು, ಆಪರೇಷನ್ ಸಿಂಧೂರದ ಬಗ್ಗೆ ಲೇವಡಿ ಮಾಡಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಶಾಸಕರಿಗೆ ಅನುಮಾನ ಇದ್ದರೆ ಪ್ಲೈಟ್‍ನಲ್ಲಿ ಹೋಗಿ ನೋಡಿಕೊಂಡು ಬರಲಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬೂಟಾಟಿಕೆಗೆ 4 ಫ್ಲೈಟ್ ಕಳಿಸಿದ್ದು ಬಿಟ್ರೆ ಏನೂ ಮಾಡಿಲ್ಲ; `ಆಪರೇಷನ್ ಸಿಂಧೂರ’ ಕುರಿತು ಕಾಂಗ್ರೆಸ್ ಶಾಸಕ ಲೇವಡಿ
ಪಾಕಿಸ್ತಾನದ ಹೀರೋ ಎಂದರೆ ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ, ಕಾಂಗ್ರೆಸ್‍ನವರಿಗೆ ಪಾಕಿಸ್ತಾನದಿಂದ ಫ್ರೀ ವೀಸಾ ಸಿಗುತ್ತದೆ. ಹೋಗಿ ಎಲ್ಲೆಲ್ಲಿ ಉಗ್ರರ ಕ್ಯಾಂಪ್ ಮೇಲೆ ದಾಳಿಯಾಗಿದೆ ಎಂದು ನೋಡಿಕೊಂಡು ಬರಲಿ. ಈ ರೀತಿ ಸೈನಿಕರ ವಿಚಾರವಾಗಿ ಮಾತನಾಡೋದು ಸರಿಯಲ್ಲ ಎಂದಿದ್ದಾರೆ.
ಕೋಲಾರದಲ್ಲಿ ಮಾತನಾಡಿದ್ದ ಶಾಸಕ ಕೊತ್ತೂರು ಮಂಜುನಾಥ್, ಕೇಂದ್ರ ಸರ್ಕಾರ ಬೂಟಾಟಿಕೆಗೆ ನಾಲ್ಕು ಫ್ಲೈಟ್ ಮೇಲೆ ಕಳಿಸಿದ್ದು ಬಿಟ್ರೆ ಏನೂ ಮಾಡಿಲ್ಲ ಎಂದು ಲೇವಡಿ ಮಾಡಿದ್ದರು. 26 ಜನ ಮಹಿಳೆಯರ ಅರಿಶಿನ ಕುಂಕುಮಕ್ಕೆ ಬೆಲೆ ಇಷ್ಟೆನಾ? ಆ ಹೆಣ್ಣು ಮಕ್ಕಳಿಗೆ ಸಿಕ್ಕ ಪರಿಹಾರ ಇದೇನಾ? ಅಂತ ಬೇಸರ ವ್ಯಕ್ತಪಡಿಸಿದ್ದರು. ಸಾಮಾನ್ಯ ಪ್ರಜೆಗಳ ಮೇಲೆ ಯುದ್ಧ ಮಾಡೋದಕ್ಕೆ ನಮ್ಮ ವಿರೋಧವಿದೆ. ಆದ್ರೆ ನಮ್ಮ ದೇಶದೊಳಗೆ ಬಂದು ಪತ್ನಿಯರ ಎದುರೇ ಪತಿಯನ್ನ ಹೊಡೆದ್ರೆ ಹೇಗೆ ಸಹಿಸೋದು? ಆ ಹೆಣ್ಣು ಮಕ್ಕಳು ಗಟ್ಟಿಯಾಗಿರೋದಕ್ಕೆ ಪರವಾಗಿಲ್ಲ. ಇಲ್ಲಾ ಅಂದ್ರೆ ಹಾರ್ಟ್ ಅಟ್ಯಾಕ್ ಆಗಿ ಸಾಯಬೇಕಿತ್ತು. ಅಂತಹದಕ್ಕೆ ಪರಿಹಾರ ಇದಲ್ಲ, ಬೇರಿಂದ ಕೊಂಬೆ ತನಕ ಎಲ್ಲವನ್ನ ಹೊಡಿಯಬೇಕು. ಭಾರತಕ್ಕೆ ಒಳ್ಳೆಯ ಅವಕಾಶ ಇತ್ತು. ಆದ್ರೆ ಏನೂ ಮಾಡಿಲ್ಲ ಅನ್ನೋದು ಬೇಸರ ತಂದಿದೆ ಎಂದಿದ್ದರು.
ಈ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಆಪರೇಷನ್ ಸಿಂಧೂರ ಸಮಾಧಾನ ತಂದಿಲ್ಲ ಅಂದಿದ್ದು, ಸೇನೆ ಬಗ್ಗೆ ಹಗುರವಾಗಿ ಮಾತಾಡಿಲ್ಲ ಎಂದು ಮಂಜುನಾಥ್ ಸ್ಪಷ್ಟನೆ ನೀಡಿದ್ದರು. ಇದನ್ನೂ ಓದಿ: ಆಪರೇಷನ್ ಸಿಂಧೂರ ಸಮಾಧಾನ ತಂದಿಲ್ಲ ಅಂದಿದ್ದು, ಸೇನೆ ಬಗ್ಗೆ ಹಗುರವಾಗಿ ಮಾತಾಡಿಲ್ಲ: ಮಂಜುನಾಥ್ ಸ್ಪಷ್ಟನೆ