ಬೆಂಗಳೂರು: ಡಿ.ಕೆ.ಶಿವಕುಮಾರ್ (D.K.Shivakumar) ವಿರುದ್ಧದ ಪ್ರಕರಣವನ್ನು ಸಿಬಿಐ ತನಿಖೆಯಿಂದ ವಾಪಸ್ ಪಡೆದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಪ್ರಕರಣಕ್ಕೆ ಸಂಬಂಧಿಸಿ ನಾಳೆ (ಬುಧವಾರ) ಹೈಕೋರ್ಟ್‌ನಲ್ಲಿ (Karnataka High Court) ಅರ್ಜಿ ವಿಚಾರಣೆ ನಡೆಯಲಿದೆ. ಹೀಗಾಗಿ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಯತ್ನಾಳ್ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರದ ಆದೇಶ ಪೂರ್ವಾಗ್ರಹ ಪೀಡಿತ ಎಂದು ಅರ್ಜಿಯಲ್ಲಿ ಯತ್ನಾಳ್ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಡಿಕೆಶಿಯಂತೆ ನಾಗೇಂದ್ರ ಮೇಲಿನ ಕೇಸ್ ಹಿಂಪಡೆಯಲಿ – ಸರ್ಕಾರಕ್ಕೆ ರೆಡ್ಡಿ ಆಗ್ರಹ
ಡಿಕೆಶಿ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂಪಡೆಯಿತು. ಕೆಲ ದಿನಗಳ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲಿ, ಸಿಬಿಐ ತನಿಖೆಗೆ ವಹಿಸಿ ಹೊರಡಿಸಿದ್ದ ಆದೇಶವನ್ನು ವಾಪಸ್ ಪಡೆಯಲಾಯಿತು.
ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ವಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿದವು. ಕಳ್ಳರ ಸರ್ಕಾರ ಕಳ್ಳನನ್ನು ರಕ್ಷಿಸುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು. ಆದರೆ ಕಾಂಗ್ರೆಸ್ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತು. ಹಿಂದಿನ ಸರ್ಕಾರದ ಆದೇಶ ಕಾನೂನುಬಾಹಿರವಾದದ್ದು. ಹೀಗಾಗಿ ಆದೇಶ ವಾಪಸ್ ಪಡೆಯಲಾಗಿದೆ ಎಂದು ತಿಳಿಸಿತ್ತು. ಇದನ್ನೂ ಓದಿ: ಡಿಕೆಶಿ ಕೇಸ್ ಗೊತ್ತಿದ್ದರೂ ತಿರುಚ್ತಿದ್ದಾರಾ ಸಿಎಂ?