ಮಂಡ್ಯ: ಜಿಲ್ಲೆಯ ಪಾಂಡವಪುರ (Pandavapura) ತಾಲೂಕಿನ ಮೇಲುಕೋಟೆಯಲ್ಲಿ ಮತ್ತೆ ಪರಿಭಾಷಿಕ ಚಿತ್ರತಂಡ ಎಡವಟ್ಟು ಮಾಡಿದೆ. ಮೇಲುಕೋಟೆ (Melukote) ಪರಂಪರೆಗೆ ಧಕ್ಕೆಯಾಗುವ ರೀತಿಯಲ್ಲಿ ತೆಲುಗು ಚಿತ್ರತಂಡ ಸೆಟ್ ಹಾಕಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಾಗಚೈತನ್ಯ (Naga Chaitanya) ಅಭಿನಯದ 3 ನಾಟ್ 2 ಚಿತ್ರತಂಡ ಮೇಲುಕೋಟೆಯಲ್ಲಿ ಅವಾಂತರ ಸೃಷ್ಟಿಸಿದೆ. ಪಾರಂಪರಿಕ ಸ್ಮಾರಕ ರಾಯಗೋಪುರದಲ್ಲಿ ಬಾರ್ ರೀತಿಯ ಸೆಟ್ ಹಾಕುವ ಮೂಲಕ ಜನರ ಭಾವನೆಗೆ ಧಕ್ಕೆಯನ್ನುಂಟು ಮಾಡಿದೆ. ರಾಯಗೋಪುರದ ಮುಂಭಾಗ ಪಾರ್ಟಿಯ ಸೆಟ್ ಹಾಕಿ ವಿವಿಧ ಬ್ರ್ಯಾಂಡ್‍ಗಳ ಮದ್ಯದ ಬಾಟಲ್‍ಗಳನಿಟ್ಟು ಚಿತ್ರೀಕರಣ ಮಾಡಿದೆ.
ಇಲ್ಲಿ ಸೆಟ್ ನಿರ್ಮಿಸಲು ಭಾರೀ ಗಾತ್ರದ ಕಬ್ಬಿಣದ ಕಂಬ ಬಳಕೆ ಮಾಡಲಾಗಿದ್ದು, ಇದರಿಂದ ರಾಯಗೋಪುರಕ್ಕೆ (Rayagopura)ಹಾನಿಯಾಗುತ್ತದೆ. ಹೀಗಾಗಿ ಚಿತ್ರದ ತಂಡದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2 ದಿನಗಳ ಚಿತ್ರಿಕರಣಕ್ಕೆ ಷರತ್ತು ಬದ್ಧ ಅನುಮತಿಯನ್ನು ಮಂಡ್ಯ ಡಿಸಿ ಅಶ್ವಥಿ ಅವರು ನೀಡಿದರು. ಇದೀಗ ಆ ನಿಯಮಗಳನ್ನು ಸಂಪೂರ್ಣ ಉಲ್ಲಂಘಿಸಿ ರಾಯಗೋಪುರದಲ್ಲಿ (Rajagopura) ಬಾರ್ ಸೆಟ್ ಹಾಗಿದ್ದಕ್ಕೆ ಜನರು ಕಿಡಿಕಾರಿದ್ದಾರೆ.
ಈ ಹಿಂದೆಯೂ ಮೇಲುಕೋಟೆ ಕಲ್ಯಾಣಿಯಲ್ಲಿ ತೆಲುಗು ಚಿತ್ರ (Tollywood) ತಂಡವೊಂದು ಶೂಟಿಂಗ್ ನಡೆಸಿ ಕಿರಿಕಿರಿ ಮಾಡಿತ್ತು. ಇದೇ ನಾಗಚೈತನ್ಯ ನಟನೆಯ ಸಿನಿಮಾ ಚಿತ್ರೀಕರಣ ವೇಳೆ ರಾಜಮುಡಿ ಉತ್ಸವಕ್ಕೆ ಅಡಚಣೆಯಾಗಿತ್ತು. ಅಲ್ಲದೇ ಅಕ್ಕ-ತಂಗಿ ಕೊಳದ ನೀರನ್ನು ಕಲುಷಿತ ಮಾಡಲಾಗಿತ್ತು. ಹೀಗಾಗಿ ಪರಭಾಷಿಕ ಚಿತ್ರಗಳ ಶೂಟಿಂಗ್‍ನಿಂದ ಮೇಲುಕೋಟೆ ಪರಂಪರೆಗೆ ಪದೇ, ಪದೇ ಧಕ್ಕೆ ಬರುತ್ತಿದೆ. ಮೇಲುಕೋಟೆಯಲ್ಲಿ ಶೂಟಿಂಗ್‍ಗೆ ಅನುಮತಿ ನೀಡದಿರಲು ಸ್ಥಳೀಯರು ಇದೀಗ ಒತ್ತಾಯ ಮಾಡುತ್ತಿದ್ದಾರೆ.