ಕಾರವಾರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಆಲದ ಮರ ಉರುಳಿ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದ ಕರ್ಕಿ ನಾಕಾ ಬಳಿ ನಡೆದಿದೆ.
ಆಲದ ಮರ ಉರುಳಿ ಬಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಭಾನುವಾರದಿಂದ ಮಳೆ ಸುರಿಯುತ್ತಿರುವುದರಿಂದ ಆಲದ ಮರ ಉರುಳಿ ಬಿದ್ದಿದೆ. ಮರಬಿದ್ದ ಹಿನ್ನಲೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದೆ. ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೆ ಮರ ತೆರವು ಮಾಡುವ ಕಾರ್ಯಾಚರಣೆ ನಡೆಯುತ್ತಿದೆ.
ಜಿಲ್ಲೆಯ ಭಟ್ಕಳದಲ್ಲಿ ಮಳೆರಾಯ ತನ್ನ ಅಬ್ಬರ ತೋರಿದ್ದಾನೆ. ಜಿಲ್ಲೆಯ ಬಹುತೇಕ ಭಾಗದಲ್ಲಿ ಅಲ್ಪ ಮಳೆಯಾಗುತ್ತಿದ್ದರೆ ಗಡಿ ಭಾಗದ ಭಟ್ಕಳದಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಮಳೆ ಆರ್ಭಟಕ್ಕೆ ರಸ್ತೆ ಅಂಗಡಿಗಳಿಗೆ ನೀರು ನುಗ್ಗಿದೆ. ಮಳೆಯ ಆರ್ಭಟಕ್ಕೆ ಉಡುಪಿ – ಭಟ್ಕಳ ಭಾಗದ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿದ್ದು ಅಲ್ಲಲ್ಲಿ ನೀರು ತುಂಬಿ ಹರಿಯುತ್ತಿದೆ.