ಕೋಲ್ಕೊತಾ: ಇತ್ತೀಚೆಗಷ್ಟೇ ಪಾಕಿಸ್ತಾನದ ಮಹಿಳೆ ಸೀಮಾ ಹೈದರ್ (Seema Haider) ತನ್ನ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಓಡಿಬಂದು ಪಬ್ಜಿ ಪ್ರೇಮಿಯನ್ನ (PUBG Lover) ಸೇರಿಕೊಂಡಿದ್ದಾಳೆ. ಅದೇ ರೀತಿ ಮತ್ತೊಂದು ಕೇಸ್ ಬೆಳಕಿಗೆ ಬಂದಿದೆ. ತನ್ನ ಪ್ರೇಮಿಯನ್ನ ಹುಡುಕಿಕೊಂಡು ಅಕ್ರಮವಾಗಿ ಭಾರತವನ್ನ ಪ್ರವೇಶಿಸಿದ್ದ ಬಾಂಗ್ಲಾದೇಶದ (Bangladesh) ಯುವತಿಯನ್ನ ಪೊಲೀಸರು ಬಂಧಿಸಿದ್ದಾರೆ.
ಬಾಂಗ್ಲಾದೇಶದ ಜೆಸ್ಸೋರ್ ಮೂಲದ ಸಪ್ಲಾ ಅಖ್ತರ್ ಬಂಧಿತ ಯುವತಿ. ತನ್ನ ಪ್ರಿಯಕರನನ್ನ ಭೇಟಿಯಾಗಲು ಅಂತಾರಾಷ್ಟ್ರೀಯ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇರೆಗೆ ಸಿಲಿಗುರಿ ಕಮಿಷನರೇಟ್ ವ್ಯಾಪ್ತಿಯ ಪ್ರಧಾನನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಕೆಗೆ ಪಬ್ಜಿ ಗೇಮ್ ಆಡುವ ವೇಳೆ ಭಾರತ ಮೂಲದ ಯುವಕನ ಪರಿಚಯವಾಗಿದೆ. ಇಬ್ಬರ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿ ಕಳೆದ ಎರಡೂವರೆ ತಿಂಗಳಿಂದ ಪ್ರತಿದಿನ ಫೋನ್ ಸಂಪರ್ಕದಲ್ಲಿದ್ದರು.
ಗಡಿ ದಾಟಿ ಬಂದ ಯುವತಿ ಜೀವನೋಪಾಯಕ್ಕಾಗಿ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡಿಕೊಂಡಿದ್ದಳು. ಇದೇ ಸಂದರ್ಭದಲ್ಲಿ ಯುವತಿಗೆ ತನ್ನ ಪ್ರಿಯಕರ ಮೋಸ ಮಾಡಿ ತನ್ನನ್ನು ನೇಪಾಳಕ್ಕೆ ಮಾರಾಟ ಮಾಡಲು ಯತ್ನಿಸುತ್ತಿದ್ದಾನೆ ಎಂಬ ವಿಷಯ ಗೊತ್ತಾಗಿದೆ. ಕೂಡಲೇ ಪ್ರಿಯಕರನಿಂದ ತಪ್ಪಿಸಿಕೊಂಡು ಸಿಲಿಗುರಿ ಪಟ್ಟಣದಲ್ಲಿ ರಾತ್ರಿಯೆಲ್ಲ ಸುತ್ತಾಡಿದ್ದಾಳೆ. ಇದನ್ನು ಕಂಡ ಸ್ವಯಂಸೇವಾ ಸಂಸ್ಥೆಯೊಂದರ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗೆ ಬೆಂಕಿ ಹಚ್ಚಿದ ಪ್ರಕರಣ- ಮನೆಗೆ ಬೀಗ ಜಡಿದು ಯುವತಿ ಮನೆಯವರು ಎಸ್ಕೇಪ್
ಸಪ್ಲಾ ಭಾರತಕ್ಕೆ ಬಂದಿದ್ದು ಹೇಗೆ?
ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವಕನನ್ನ 21 ವರ್ಷದ ಸಪ್ಲಾ ಅಖ್ತರ್ ನಂಬಿದ್ದಳು. ಎರಡೂವರೆ ತಿಂಗಳ ಹಿಂದೆಯೇ ಸಪ್ಲಾ, ಗಡಿ ದಾಟಿ ಭಾರತ ಪ್ರವೇಶಿಸಿದ್ದಳು. ಭದ್ರತಾ ಪಡೆಗಳ ಕಣ್ತಪ್ಪಿಸಿ ಗಡಿಯಲ್ಲಿನ ಮುಳ್ಳು ತಂತಿ ಬೇಲಿಯನ್ನು ದಾಟಿ ಬಂದಿದ್ದಳು. ಆಕೆಯ ಬಳಿ ಪಾಸ್‌ಪೋರ್ಟ್ ಕೂಡ ಇಲ್ಲ. ಆರಂಭದಲ್ಲಿ ಪ್ರಿಯಕರನ ಜೊತೆ ಸೇರಿಕೊಳ್ಳುವ ಸಂತಸದಲ್ಲಿದ್ದ ಸಪ್ಲಾ, ಗೆಳೆಯನೊಂದಿಗೆ ವಿದೇಶಿ ನೆಲದಲ್ಲಿ ಜೀವನ ಕಟ್ಟಿಕೊಳ್ಳುವ ಕನಸು ಕಂಡಿದ್ದಳು. ಆದ್ರೆ ಗೆಳೆಯನ ಮುಖವಾಡ ಬಯಲಾಗುತ್ತಿದ್ದಂತೆ ಆತನ ಹಿಡಿತದಿಂದ ಹೇಗೋ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.
ಬುಧವಾರ ರಾತ್ರಿ ಸಿಲಿಗುರಿ ಜಂಕ್ಷನ್ ಪ್ರದೇಶದಲ್ಲಿ ಆಕೆ ಗೊತ್ತು ಗುರಿಯಿಲ್ಲದೆ ಓಡಾಡುತ್ತಿದ್ದಳು. ಎನ್‌ಜಿಒ ಒಂದು ಆಕೆಯನ್ನು ಗಮನಿಸಿ, ಕಂಗಾಲಾಗಿದ್ದ ಆಕೆಯನ್ನು ಮಾತನಾಡಿಸಿದೆ. ಬಳಿಕ ಯುವತಿಯನ್ನು ಪ್ರಧಾನ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಒಪ್ಪಿಸಿದ್ದಾರೆ. ಇದನ್ನೂ ಓದಿ: ಹಿಂದೂ ಧರ್ಮ ಸ್ವೀಕರಿಸಿದ್ದೇನೆ, ಸಸ್ಯಾಹಾರಿ ಜೀವನಶೈಲಿ ಅನುಸರಿಸ್ತೇನೆ – ಪ್ರೇಮಿಗಾಗಿ ಬದಲಾದ ಪಾಕ್ ಮಹಿಳೆ
ಪ್ರಿಯಕರನಿಗಾಗಿ ಹುಡುಕಾಟ:
ಕೂಲಂಕಷ ವಿಚಾರಣೆ ಬಳಿಕ ಸಪ್ಲಾಳನ್ನು ಅಕ್ರಮವಾಗಿ ಗಡಿ ದಾಟಿದ ಕಾರಣಕ್ಕಾಗಿ ಪೊಲೀಸರು ಬಂಧಿಸಿದ್ದಾರೆ. ಸಪ್ಲಾಳ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು ಆಕೆಗೆ ಕೈಕೊಟ್ಟಿರುವ ಪ್ರಿಯಕರನಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನದಿಂದ ನಾಲ್ಕು ಮಕ್ಕಳ ಸಹಿತ ನೇಪಾಳ ಮಾರ್ಗವಾಗಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಸೀಮಾ ಹೈದರ್ ಎಂಬ ಮಹಿಳೆ ಬಂಧಿತಳಾಗಿ ಜಾಮೀನಿನ ಮಲೆ ಹೊರಗೆ ಬಂದಿದ್ದಾಳೆ. ಆಕೆ ಈಗ ತನ್ನ ಪ್ರಿಯಕರನೊಂದಿಗೆ ಮದುವೆಯಾಗಿ ನೊಯ್ಡಾದಲ್ಲಿ ಹೊಸ ಜೀವನ ಪ್ರಾರಂಭಿಸಿದ್ದಾಳೆ. ಕಳೆದ ವರ್ಷವೂ ಬಾಂಗ್ಲಾದೇಶದಿಂದ ಯುವತಿಯೊಬ್ಬಳು ಪ್ರಿಯಕರನಿಗಾಗಿ ನದಿ ಈಜಿ ಭಾರತಕ್ಕೆ ಬಂದಿದ್ದ ಘಟನೆ ಸದ್ದು ಮಾಡಿತ್ತು.
Web Stories