ಬೆಂಗಳೂರು: ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿರುವ ಬೆಂಗಳೂರು ವಿಶ್ವವಿದ್ಯಾಲಯ (Bengaluru University) ಮತ್ತೊಂದು ಹಿರಿಮೆಗೆ ಪಾತ್ರವಾಗಿದೆ. ರಾಷ್ಟ್ರೀಯ ಸಂಸ್ಥೆ ಶ್ರೇಯಾಂಕ ಚೌಕಟ್ಟು National Institute Ranking Framework (NIRF) ಶ್ರೇಯಾಂಕದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ರಾಷ್ಟ್ರಮಟ್ಟದ ಎಲ್ಲಾ ಪ್ರವರ್ಗಗಳಲ್ಲಿ 65ನೇ ಅಗ್ರಸ್ಥಾನಕ್ಕೆ ಭಾಜನವಾಗಿದೆ.
ರಾಷ್ಟ್ರಮಟ್ಟದ ಎಲ್ಲಾ ಸರ್ಕಾರಿ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ 26ನೇ ಸ್ಥಾನ ಪಡೆದಿದೆ. ಈ ಮೂಲಕ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ತನ್ನ ಸಾಧನೆ ಮುಂದುವರೆಸಿದೆ. 2024ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು 81ನೇ ಸ್ಥಾನದಲ್ಲಿತ್ತು. ಇದೀಗ ಬೆಂಗಳೂರು ವಿಶ್ವವಿದ್ಯಾಲಯವು ಗಮನಾರ್ಹವಾಗಿ ಸುಧಾರಿಸಿದೆ. ವಿದ್ಯಾರ್ಥಿ ಸ್ನೇಹಿ ವಾತವರಣ, ಅನುಭವಿ ಶಿಕ್ಷಕ ವರ್ಗ, ಅತ್ಯುತ್ತಮ ಪಠ್ಯಾಧಾರಿತ ಶಿಕ್ಷಣ, ತಂತ್ರಜ್ಞಾನಕ್ಕೆ ಆದ್ಯತೆ, ಕ್ರಿಯಾಶೀಲತೆ, ನಾವೀನ್ಯತೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ವಾತವರಣ ಒದಗಿಸಿರುವ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಈ ಶ್ರೇಯಾಂಕ ದಕ್ಕಿರುವುದು ವಿವಿ ಬದ್ದತೆ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದೆ.ಇದನ್ನೂ ಓದಿ: ಮೋದಿ ಸರ್ಕಾರ GST ಸರಳೀಕರಣ ಮಾಡಿ ದಸರಾ, ದೀಪಾವಳಿ ಉಡುಗೊರೆ ಕೊಟ್ಟಿದೆ – ಮಹೇಶ್ ತೆಂಗಿನಕಾಯಿ
ವಿಶ್ವದಲ್ಲೇ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಅತ್ಯುತ್ತಮ ವಿಶ್ವವಿದ್ಯಾಲಯ ಎಂದು ಗುರುತಿಸಿಕೊಂಡಿದ್ದು, NAAC A++ ಮತ್ತು ಪಿಎಂ – ಉಷಾ ಯೋಜನೆಯಡಿ 100 ಕೋಟಿ ರೂ. ಅನುದಾನವನ್ನು ಪಡೆದುಕೊಂಡಿತ್ತು. ಮುಂದುವರೆದ ಭಾಗವಾಗಿ NIRF ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಪಡೆಯುವ ಮೂಲಕ ಬೆಂಗಳೂರು ವಿವಿ ಶೈಕ್ಷಣಿಕ ಸಾಧನೆಯ ಪರಂಪರೆಯನ್ನು ಮುಂದುವರೆಸಿದೆ.
ಈ ಸಂದರ್ಭದಲ್ಲಿ ಕುಲಪತಿಗಳು ಕರ್ನಲ್ ಡಾ.ಜಯಕರ.ಎಸ್.ಎಂ ಪ್ರತಿಕ್ರಿಯಿಸಿದ್ದು, NIRF ಶ್ರೇಯಾಂಕದಲ್ಲಿ ಸ್ಥಾನ ಪಡೆದಿರುವುದು ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ವಿಷಯ. ಶಿಕ್ಷಣ, ಸಂಶೋಧನೆ, ತಂತ್ರಜ್ಞಾನ, ಮೂಲಭೂತ ಸೌಕರ್ಯ ಮತ್ತು ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ ಮತ್ತಷ್ಟು ಬಲ ಬಂದಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ವಿಶ್ವವಿದ್ಯಾಲಯ ಮತ್ತಷ್ಟು ಶ್ರಮಿಸಲಿದೆ. ಈ ಸಾಧನೆಗೆ ಕಾರಣಕರ್ತರಾದ ಸರ್ವರಿಗೂ ಧನ್ಯವಾದ ಮತ್ತು ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 2,200ಕ್ಕೆ ಏರಿಕೆ