ಬೆಂಗಳೂರು: ರಾಜ್ಯ ರಾಜಕೀಯದ ಬಿಕ್ಕಟ್ಟು ಅಂತ್ಯವಾಗೋ ಲಕ್ಷಣ ಕಾಣುತ್ತಿಲ್ಲ. ಕಳೆದ ವಾರ ಸ್ವತಃ ವಿಶ್ವಾಸಮತ ಯಾಚಿಸಲು ಅವಕಾಶ ಕೋರಿದ್ದ ಮುಖ್ಯಮಂತ್ರಿಗಳು ಈಗ ವಿಶ್ವಾಸಮತಯಾಚಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ.
ವಿಶ್ವಾಸಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿಗೆ ನಿನ್ನೆ ರಾಜ್ಯಪಾಲರು ಎರಡು ಬಾರಿ ಗಡುವು ಕೊಟ್ಟರೂ ಅದನ್ನು ದೋಸ್ತಿ ಸರ್ಕಾರ ಮತ್ತು ಸ್ಪೀಕರ್ ಗಣನೆಗೆ ತೆಗೆದುಕೊಳ್ಳಲಿಲ್ಲ. ಚರ್ಚೆ ಆಗಬೇಕು, ಮಾತನಾಡುವವರು ಸಾಕಷ್ಟು ಮಂದಿ ಇದ್ದಾರೆ ಎಂದು ಹೇಳಿ ದೋಸ್ತಿಗಳು ಪಟ್ಟು ಹಿಡಿದರು.
ರಾತ್ರಿ 12 ಗಂಟೆ ಆದರೂ ಪರ್ವಾಗಿಲ್ಲ ಚರ್ಚೆ ನಡೆದು, ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕಿ ಎಂದು ಬಿಜೆಪಿ ಕೇಳಿಕೊಂಡರೂ ಯಾರು ಸ್ಪಂದಿಸಲಿಲ್ಲ. ಕೊನೆಗೆ ಸ್ಪೀಕರ್ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು. ಎಂದಿನಂತೆ ಶಾಸಕರು ರೆಸಾರ್ಟ್ ಸೇರಿಕೊಂಡರು. ಈ ಬೆನ್ನಲ್ಲೇ ರಾಜ್ಯದ ಬೆಳವಣಿಗೆಗಳ ಬಗ್ಗೆ ರಾಜ್ಯಪಾಲರು ಕೇಂದ್ರ ಗೃಹ ಸಚಿವಾಲಯಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದಾರೆ.
ಈ ಸಂಬಂಧ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಯಲಿದೆ. ಬಳಿಕ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಂಪುಟ ಸಮಿತಿ ಸಭೆ ಕೂಡ ನಡೆಯಲಿದೆ. ರಾಜ್ಯಪಾಲರ ವರದಿ ಮೇಲೆ ಗೃಹ ಸಚಿವರ ಸಲಹೆ ಪಡೆಯಲಿರುವ ಮೋದಿ ನೇತೃತ್ವದ ಸಮಿತಿ, ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಆದರೆ ಸೋಮವಾರ ವಿಶ್ವಾಸಮತ ಯಾಚಿಸುವುದಾಗಿ ಸಿಎಂ ಹೇಳಿರುವ ಕಾರಣ ಸದ್ಯದ ಮಟ್ಟಿಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುವ ಸಂಭವ ಕಡಿಮೆ ಎಂದು ಹೇಳಲಾಗುತ್ತಿದೆ. ಅತ್ತ ಅತೃಪ್ತರು ಮುಂಬೈನಲ್ಲೇ ಉಳಿದಿದ್ದು, ಎಲ್ಲಾ ಬೆಳವಣಿಗೆಗಳನ್ನು ಅಲ್ಲಿಂದಲೇ ಗಮನಿಸುತ್ತಿದ್ದಾರೆ.