ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೋ ಹೆಲ್ಮೆಟ್, ನೋ ಪೆಟ್ರೋಲ್ ಎಂಬ ಹೊಸ ರೂಲ್ಸ್ ಜಾರಿಗೆ ತರಲು ಸಿದ್ಧತೆ ನಡೆದಿದೆ.
ಈ ವಿಚಾರವಾಗಿ ಟ್ರಾಫಿಕ್ ಪೊಲೀಸ್ ಕಮಿಷನರ್, ಪೆಟ್ರೋಲ್ ಬಂಕ್ ಮಾಲೀಕರ ಜೊತೆ ಮಾತುಕತೆ ನಡೆಸಿದ್ದಾರೆ. ಶನಿವಾರ ಮತ್ತೊಮ್ಮೆ ಈ ವಿಚಾರವಾಗಿ ಮಾತುಕತೆ ನಡೆಸಿ ಎಲ್ಲ ಅಂದುಕೊಂಡಂತೆ ಆದರೆ ಮುಂದಿನ ಸೋಮವಾರದಿಂದಲೇ ಈ ಹೊಸ ನಿಯಮ ಜಾರಿಯಾಗಲಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಈ ನಿಯಮ ಈಗಾಗಲೇ ಕೇರಳ, ಆಂಧ್ರ ಸೇರಿದಂತೆ ದೇಶದ ವಿವಿಧೆಡೆ ಜಾರಿಯಾಗಿದೆ. ಇದರ ಪ್ರಕಾರ ನಿಮ್ಮ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸಬೇಕು ಎಂದರೆ ಹೆಲ್ಮೆಟ್ ಇರಲೇಬೇಕು. ಒಂದು ವೇಳೆ ನಿಮ್ಮ ಬಳಿ ಹೆಲ್ಮೆಟ್ ಇಲ್ಲ ಎಂದರೆ ಬಂಕ್‍ನವರು ನಿಮ್ಮ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕುವುದಿಲ್ಲ. ಬೆಂಗಳೂರಲ್ಲಿ ಬೈಕ್ ಅಪಘಾತದಿಂದ ಹೆಚ್ಚುತ್ತಿರುವ ಸಾವು-ನೋವು ತಡೆಗೆ ಈ ಹೊಸ ನಿಯಮವನ್ನು ತರಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಕಳೆದ ವರ್ಷ ಬೈಕ್ ಅಪಘಾತಗಳಲ್ಲಿ ಸುಮಾರು 150 ಮಂದಿ ದುರ್ಮರಣಕ್ಕೀಡಾಗಿದ್ದರು. ದಂಡ ವಿಧಿಸುತ್ತಿದರೂ ಹೆಲ್ಮೆಟ್ ಬಳಸದೇ ವಾಹನ ಚಲಾಯಿಸುವವರ ಸಂಖ್ಯೆ ಕಡಿಮೆಯಾಗದಿದ್ದರಿಂದ, ಈ ನೂತನ ನಿಯಮ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ.