ಬೆಂಗಳೂರು: ನಡು ರಸ್ತೆಯಲ್ಲಿ ಯುವಕನೊಬ್ಬ ಪ್ರಿಯತಮೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಮಹಾಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ.
ಯುವಕ ಮತ್ತು ಯುವತಿ ಸ್ಕೂಟರಿನಲ್ಲಿ ಸ್ಥಳಕ್ಕೆ ಆಗಮಿಸಿದ್ದು, ಈ ವೇಳೆ ಯುವತಿಯನ್ನು ಬೈಯುತ್ತಾ ಆಕೆಯ ಮೇಲೆ ಪ್ರಿಯಕರ ಹಲ್ಲೆ ನಡೆಸಿದ್ದಾನೆ. ನಡುರಸ್ತೆಯಲ್ಲೇ ಕೆಲ ಸಮಯ ಮಾತನಾಡುತ್ತಾ ನಿಂತಿದ್ದ ಯುವಕ ಏಕಾಏಕಿ ಮುನ್ನುಗ್ಗಿ ಹಲ್ಲೆ ನಡೆಸಿದ್ದಾನೆ. ಈ ದೃಶ್ಯಗಳು ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲದೇ ಸ್ಥಳೀಯರು ಕೂಡ ತಮ್ಮ ಮೊಬೈಲ್ ನಲ್ಲಿ ದೃಶ್ಯವನ್ನು ಸೆರೆಹಿಡಿದಿದ್ದು, ಸದ್ಯ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
Advertisement
ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸ್ಥಳೀಯ ಯುವಕ, ಇಬ್ಬರನ್ನು ಅಡ್ಡಹಾಕಿ ಪ್ರಶ್ನಿಸಿದ್ದಾನೆ. ನಡುರಸ್ತೆಯಲ್ಲಿ ಯುವತಿಯ ಮೇಲೆ ಹೇಗೆ ಹಲ್ಲೆ ನಡೆಸಿದೆ ಎಂದು ಪ್ರಶ್ನೆ ಮಾಡಿದ್ದಾನೆ. ಕೊನೆಗೆ ಯುವತಿಯೇ ಸ್ಥಳೀಯ ಯುವಕನಿಂದ ಪ್ರಿಯಕರನನ್ನ ಬಿಡಿಸಿದ್ದಾಳೆ. ಈ ವೇಳೆ ಕುಟುಂಬ ವಿಚಾರದಲ್ಲಿ ಮನಸ್ತಾಪವಾಗಿ ಹಲ್ಲೆ ನಡೆಸಿದೆ ತಪ್ಪಾಯ್ತು ಬಿಟ್ಟು ಬಿಡಿ ಎಂದು ಪ್ರಿಯಕರ ಕೇಳಿಕೊಂಡಿದ್ದಾನೆ.
Advertisement
ಇಬ್ಬರ ಗಲಾಟೆಯ ವಿಚಾರವನ್ನು ಸ್ಥಳೀಯ ಯುವಕ ಬೀಟ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಬೀಟ್ ಪೊಲೀಸ್ರು ಪ್ರೇಮಿಗಳಿಬ್ಬರಿಗೂ ಬುದ್ಧಿವಾದ ಹೇಳಿ ಕಳಿಸಿದ್ದಾರೆ. ಈ ಬಗ್ಗೆ ಯಾರೂ ದೂರು ಕೊಡದ ಹಿನ್ನೆಲೆ ಪ್ರಕರಣ ದಾಖಲಾಗಿಲ್ಲ. ಅಲ್ಲದೇ ಯುವತಿ ಮೇಲೆ ಹಲ್ಲೆ ಮಾಡಿದ್ದನ್ನು, ಅದೂ ನಡು ರಸ್ತೆಯಲ್ಲಿ ಹಲ್ಲೆ ಮಾಡಿದ್ದನ್ನು ಪ್ರಶ್ನಿಸಿದ ಸ್ಥಳೀಯ ಯುವಕನ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.